- ಕೃಷಿ ಸುದ್ದಿಕೃಷಿ ಮಾರುಕಟ್ಟೆ
- October 1, 2022
- No Comment
- 695
ಭೂತಾನ್ ನಿಂದ ಅಡಿಕೆ ಆಮದಿಗೆ ಕೇಂದ್ರ ಅನುಮತಿ – ಅಡಿಕೆ ಧಾರಣೆ ಕುಸಿಯುವ ಭೀತಿ, ಬೆಳೆಗಾರರಲ್ಲಿ ಆತಂಕ

ಕೃಷಿ ಲೋಕ : ಭೂತಾನ್‌ನಿಂದ ಪ್ರತಿ ವರ್ಷ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 2006ರಲ್ಲಿ ಜಾರಿಗೆ ತರಲಾಗಿರುವ ‘ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ’ (ಸಫ್ಲಾ)ದ ಅಡಿಯಲ್ಲಿ ಕನಿಷ್ಠ ಆಮದು ಬೆಲೆಯ (ಎಂಐಸಿ) ಷರತ್ತು ಇಲ್ಲದೆ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯನ್ನು ಮುಕ್ತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಸಫ್ಲಾದ ಅಡಿಯಲ್ಲಿ ಬಾಂಗ್ಲಾದೇಶ, ಭೂತಾನ್, ಮಾಲೀವ್ ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾದಿಂದ ಮುಕ್ತವಾಗಿ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ, ಈ ದೇಶಗಳ ಅಡಿಕೆ ಭಾರತ ಮಾರುಕಟ್ಟೆಗೆ ಹರಿದು ಬರುತ್ತಲೇ ಇದೆ. ಕನಿಷ್ಠ ಆಮದು ಧಾರಣೆಯನ್ನು ಹೆಚ್ಚಿಸಿದರೂ ಪ್ರಯೋಜನವಾಗದೇ ಇದ್ದಾಗ 2018ರ ಜುಲೈನಲ್ಲಿ 251 ರೂ.ಗಳಿಗಿಂತ ಕಡಿಮೆ ಬೆಲೆಯ ಅಡಿಕೆಯನ್ನು ಆಮದು ಮಾಡಿಕೊಳ್ಳುವಂತಿಲ್ಲ ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು.
ಈಗ ಅದೇ ಸರ್ಕಾರ, ಎಂಐಪಿ ಇಲ್ಲದೆ ಭೂತಾನ್‌ನಿಂದ ಅಡಿಕೆ ಆಮದಿಗೆ ಅವಕಾಶ ಮಾಡಿಕೊಟ್ಟಿದೆ. ಈ ಸಂಬಂಧ ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆ ಹೊರಡಿಸಿದೆ. ಭೂತಾನ್‌ನಿಂದ ಭೂಮಾರ್ಗದಲ್ಲಿ ಮಾತ್ರ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯನ್ನು ಯಾವುದೇ ಆಮದು ಶುಲ್ಕವಿಲ್ಲದೆ, ಪ್ರತಿ ವರ್ಷ ಆಮದು ಮಾಡಿಕೊಳ್ಳಬಹುದಾಗಿದೆ. ಆಮದು ಮಾಡಿಕೊಳ್ಳುವವರು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ ನೀಡುವ ಅಧಿಕೃತ ಪರವಾನಗಿಯನ್ನು ಹೊಂದಿರಬೇಕು’ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಪ್ರಸಕ್ತ ಸಾಲಿನ ದ್ವಿತೀಯಾರ್ಧದಲ್ಲಿ 8,500 ಮೆಟ್ರಿಕ್ ಟನ್ ಅಡಿಕೆ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಮುಂದಿನ ವರ್ಷದಲ್ಲಿ 17,000 ಸಾವಿರ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಬಹುದು. ಪರವಾನಗಿಯನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿತರಿಸಲಾಗುತ್ತದೆ. ಒಮ್ಮೆ ಪಡೆದ ಪರವಾನಗಿಯಲ್ಲಿ ಒಬ್ಬ ವ್ಯಾಪಾರಿಯು 500 ಮೆಟ್ರಿಕ್ ಟನ್ ಅಡಿಕೆ ಆಮದು ಮಾಡಿಕೊಳ್ಳಬಹುದು.

ದೇಶದಲ್ಲಿ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, ಕೇರಳ ಮತ್ತು ಅಸ್ಸಾಂ ಎರಡನೇ ಸ್ಥಾನದಲ್ಲಿವೆ.
ಇನ್ನೂ ಈ ಆದೇಶ ಹೊರಬೀಳುತ್ತಿದ್ದಂತೆ ಅಡಿಕೆ ಕೃಷಿಕರು ಆಕ್ರೋಶ ಹೊರಹಾಕಿದ್ದು, ದೇಶದ ಅಡಿಕ ಬೆಳೆಗಾರರ ಹಿತದೃಷ್ಟಿಯಿಂದ ತಕ್ಷಣವೇ ಈ ಅನುಮತಿಯನ್ನು ರದ್ದು ಮಾಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಆದೇಶದಿಂದ ಇಲ್ಲಿನ ಅಡಿಕೆ ಮಾರುಕಟ್ಟೆಗೆ, ಅಡಿಕ ಬೆಳಗೆ ಯಾವುದೇ ಪರಿಣಾಮ ಬೀರದು. ಆದರ ಭವಿಷ್ಯದಲ್ಲಿ ಅಡಿಕೆ ಧಾರಣೆಯ ಮೇಲೆ, ಅಡಿಕೆ ಬೆಳಗಾರರ ಮೇಲೆ ನಾನಾ ರೀತಿಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇಲ್ಲಿ ಹಸಿ ಅಡಿಕೆ ಅಥವಾ ಚಾಲಿ ಅಡಿಕೆ ಅಥವಾ ದ್ವಿತೀಯ ದರ್ಜೆಯ ಅಡಿಕೆ ಎಂಬುದರ ಬದಲಾಗಿ ಅಡಿಕೆ ಆಮದು ಯಾವುದೇ ವಿಧದಿಂದ ಆದರೂ ಬೇರೆ ಬೇರೆ ಕಾರಣಗಳಿಂದ ದೇಶದ ಅಡಿಕೆ ಬೆಳೆಗಾರರಿಗೆ ಹಾನಿ ಇದೆ. ಹೀಗಾಗಿ ಅಡಿಕೆ ಆಮದು ಯಾವುದೇ ಕಾರಣದಿಂದ ನಡೆಯಬಾರದು. ಇದರ ಜೊತೆಗೆ ಅಡಿಕೆ ಆಮದು ಕನಿಷ್ಠ ಧಾರಣೆ 350 ರೂ. ನಿಗದಿ ಮಾಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸುತ್ತದೆ ಎಂದು ಅಶೋಕ್ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಹೇಳಿದ್ದಾರೆ.