- ಕೃಷಿ ಸುದ್ದಿ
- February 3, 2022
- No Comment
- 972
ರೈತರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ – ಗಂಗಾ ಕಲ್ಯಾಣ ಯೋಜನೆಯಡಿ 30 ದಿನಗಳಲ್ಲೇ ವಿದ್ಯುದೀಕರಣಕ್ಕೆ ಸಚಿವ ಸುನೀಲ್ ಕುಮಾರ್ ಸೂಚನೆ…

ಕೃಷಿ ಲೋಕ : ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದ ರೈತರಿಗೆ ಸಂತಸದ ಸುದ್ದಿ. ಈಗಾಗಲೇ ಗಂಗಾ ಕಲ್ಯಾಣ ಯೋಜನೆ ಯಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಗಂಗಾ ಕಲ್ಯಾಣ ಯೋಜನೆಯ ಸಂಪರ್ಕ ಹಾಗೂ ವಿದ್ಯುದೀಕರಣದಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಠೇವಣಿ ಹಣ ಜಮಾ ಆದ 30 ದಿನಗಳೊಳಗೆ ವಿದ್ಯುದೀಕರಣ ಸಂಪರ್ಕ ಕಲ್ಪಿಸಬೇಕೆಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಾಬು ಜಗಜೀವನರಾಮ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ ತಾಂಡಾ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಇನ್ನಿತರ ಅಭಿವೃದ್ಧಿ ನಿಗಮಗಳಿಂದ ಅರ್ಜಿ ಸಲ್ಲಿಸಿದ ರೈತರಿಗೆ ಧನ ಸಹಾಯ ಮಾಡಲಾಗುತ್ತದೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆಯಾದ ರೈತರು ಬೋರ್ ವೆಲ್ ಕೊರೆಸಿದಂ ನಂತರ ಸಂಬಂಧಪಟ್ಟ ವಿದ್ಯುತ್ ವಿತರಣಾ ಕಂಪನಿ ವ್ಯಾಪ್ತಿಯಲ್ಲಿ ಈಗಾಗಲೇ ದಾಖಲಿಸಿರುವ ಅರ್ಜಿಯ ಜೊತೆಗೆ ಸರ್ಕಾರ ನಿಗದಿಪಡಿಸಿದ 50 ಸಾವಿರ ರೂಪಾಯಿ ಠೇವಣಿ ಸಂದಾಯ ಮಾಡಬೇಕಾಗುತ್ತದೆ. ರೈತರು 50 ಸಾವಿರ ರೂಪಾಯಿ ಠೇವಣಿ ಸಂದಾಯ ಮಾಡಿದನಂತರ 30 ದಿನಗಳೊಳಗೆ ವಿದ್ಯುದೀಕರಣ ವ್ಯವಸ್ಥೆ ಕಲ್ಪಿಸಬೇಕೆಂದು ಇಲಾಖೆಯ ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.
ಆದಷ್ಟು ಬೇಗ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಳೆದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಅವಧಿಯಲ್ಲಿ ವಿವಿಧ ಅಭಿವೃದ್ಧಿ ನಿಗಮಗಳಿಂದ ಗಂಗಾ ಕಲ್ಯಾಣ ಯೋಜ ನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ರೈತರೂ ಸಹ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಯೋಜನೆ ಯಡಿಯಲ್ಲಿ ಆಯ್ಕೆಯಾದ ರೈತರಿಗೆ ಅತೀ ಶೀಘ್ರದಲ್ಲಿ ವಿದ್ಯುದೀಕರಣ ಸಂಪರ್ಕ ಕಲ್ಪಿಸಲಾಗುವುದು.
ಏನಿದು ಗಂಗಾ ಕಲ್ಯಾಣ ಯೋಜನೆ?
ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಯಲು 3 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆದು ಪಂಪ್ ಸೆಟ್ ಹಾಗೂ ಇತರ ಪೂರಕ ಸಾಮಗ್ರಿಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಘಟಕದ ವೆಚ್ಚ 3.5 ಲಕ್ಷ ರೂಪಾಯಿ ಆಗಿದ್ದು, 3 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು. 50 ಸಾವಿರ ರೂಪಾಯಿಯವರೆಗೆ ಸಾಲಸೌಲಭ್ಯವೂ ಇರತ್ತದೆ. 3 ಲಕ್ಷ ರೂಪಾಯಿಯ ಸಹಾಯಧನದಲ್ಲಿ 50 ಸಾವಿರ ರೂಪಾಯಿ ವಿದ್ಯುದ್ದೀಕಾರಣ ಬಾಬ್ತು ಒಳಗೊಂಡಿರುತ್ತದೆ.
ನಿಗಮವು ನೀಡುವ ಸಾಲಕ್ಕೆ ವಾರ್ಷಿಕ ಶೇ. 6 ರಷ್ಟು ಬಡ್ಡಿ ಇರುತ್ತದೆ. ಇದನ್ನು 6 ವರ್ಷಗಳಲ್ಲಿ ಅರ್ಧ ವಾರ್ಷಿಕ ಕಂತುಗಳಲ್ಲಿ ಮರು ಪಾವತಿ ಮಾಡಬೇಕಾಗುತ್ತದೆ. ಅಂತರ್ಜಾಲಮಟ್ಟ ಕುಸಿದಿರುವ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚವನ್ನು 4.5 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. 50 ಸಾವಿರ ರೂಪಾಯಿ ಸಾಲ ಒಳಗೊಂಡಿರುತ್ತದೆ. ಮೇಲೆ ತಿಳಿಸಿದ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಿಗೆ 3.5 ಲಕ್ಷ ರೂಪಾಯಿ ಘಟಕದ ವೆಚ್ಚ ನಿಗದಿಪಡಿಸಲಾಗಿದೆ.