- ಕೃಷಿ ಸುದ್ದಿ
- January 1, 2022
- No Comment
- 428
ಟೀಂ ನ್ಯೂಸ್ ಆ್ಯರೋ ಪ್ರಸ್ತುತಪಡಿಸುವ ಕೃಷಿ ಲೋಕ.ಕಾಂ ಇಂದು ಬಿಡುಗಡೆ | ಸಂಪಾದಕರ ಮಾತು – ಕೃಷಿ ಲೋಕದ ಉದ್ದೇಶ ಮತ್ತು ಸಾಗಲಿರುವ ದಾರಿಯ ಕುರಿತು ವಿಚಾರ ವಿನಿಮಯ

ಕೃಷಿ ಲೋಕ : ಪ್ರಾಚೀನ ಕಾಲದಲ್ಲಿ ಪರಿಸರದಲ್ಲಿ ಸಿಕ್ಕ ಹಣ್ಣು ಹಂಪಲುಗಳನ್ನು ತಿನ್ನುತ್ತ ಮನುಷ್ಯ ತನ್ನ ಜೀವನವನ್ನು ಸಾಗಿಸುತ್ತಿದ್ದ. ಕ್ರಮೇಣ ಕಾಲ ಬದಲಾದಂತೆ ಬೆಳೆದ ದವಸ ಧಾನ್ಯಗಳನ್ನು ತಿಂದು ಬದುಕುವುದಕ್ಕಾಗಿಯೇ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ. ನಂತರದ ದಿನಗಳಲ್ಲಿ ಕೃಷಿ ಎನ್ನುವುದು ವಾಣಿಜ್ಯ ಚಟುವಟಿಕೆಯಾಗಿ ರೂಪುಗೊಂಡಿತು.
ಭಾರತೀಯ ಕೃಷಿ ವಿಚಾರಕ್ಕೆ ಬರುವುದಾದರೆ ಆಹಾರ ಉತ್ಪಾದನೆಯಲ್ಲಿ ಸಾಕಷ್ಟು ಸ್ವಾವಲಂಬನೆ ಸಾಧಿಸಿದ್ದೇವೆ. ಆದರೆ ಜನಸಂಖ್ಯೆ ದಿನೇ ದಿನೇ ತೀವ್ರ ಗತಿಯಲ್ಲಿ ಹೆಚ್ಚುತ್ತಿದ್ದು ಅವರಿಗೆ ಬೇಕಾಗುವಷ್ಟು ಆಹಾರ ಉತ್ಪಾದನೆಯಾಗಬೇಕಾಗಿದೆ. ಜನಸಂಖ್ಯೆ ಹೆಚ್ಚಿದಂತೆ ಜನರು ಆಹಾರದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಉತ್ಪಾದನೆಗೆ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವುದು ಅತ್ಯಗತ್ಯ ಹಾಗೂ ಅಲ್ಲದೆ ಆಹಾರ ಅನಿವಾರ್ಯವೂ ಹೌದು.
ಆಧುನಿಕ ಜಗತ್ತಿನಲ್ಲಿ ಕೃಷಿ ಸಂಶೋಧನೆಗಳು ತೀವ್ರ ಗತಿಯಲ್ಲಿ ಸಾಗುತ್ತಿದ್ದು ಇವುಗಳಲ್ಲಿ ಮುಖ್ಯವಾಗಿ ತಳಿ ಅಭಿವೃದ್ಧಿ, ಸಾಗುವಳಿ ಕ್ರಮಗಳು, ಪೋಷಕಾಂಶ, ನೀರಾವರಿ, ಕೀಟ ಹಾಗೂ ರೋಗಗಳ ಹತೋಟಿ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ವೈಜ್ಞಾನಿಕ ಹಾಗೂ ತಾಂತ್ರಿಕ ಕೃಷಿ ಮಾಹಿತಿಗಳು ಲಭ್ಯವಿದ್ದು , ರೈತರು ಇವುಗಳ ಸಮಗ್ರ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹುದಲ್ಲದೆ ಜಮೀನಿನ ಫಲವತ್ತತೆಯನ್ನು ಸಹ ಕಾಪಾಡಿಕೊಂಡು ಬರಬಹುದಾಗಿದೆ.
ಈ ವೈಜ್ಞಾನಿಕ ಕೃಷಿ ಮಾಹಿತಿಗಳನ್ನು ರೈತರು ಹಾಗೂ ಕೃಷಿಯಲ್ಲಿ ನಿರತರಾದವರು ವಿವಿಧ ಮಾಧ್ಯಮಗಳಿಂದ ಪಡೆಯುತ್ತಿದ್ದಾರೆ. ಅಲ್ಲದೇ ರೈತರು ಈಗ ಸಾಕಷ್ಟು ಕಲಿತವರಾಗಿರುವುದರಿಂದ ಮತ್ತು ಪ್ರತಿಯೊಬ್ಬರು ಕೂಡ ಮೊಬೈಲ್ ಬಳಕೆ ಬಲ್ಲವರಾಗಿರುವುದರಿಂದ ಕೃಷಿ ವಿಚಾರಗಳನ್ನು ಓದಿ ತಿಳಿದುಕೊಳ್ಳುವ ಆಸಕ್ತಿ ಅವರಿಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ವಿಚಾರಕ್ಕಾಗಿಯೇ ನಾವು ಕೃಷಿ ಲೋಕ.ಕಾಂ ಅನ್ನು ಪ್ರಾರಂಭಿಸಿದ್ದೇವೆ.
ಕೃಷಿ ಲಾಭದಾಯಕವಾಗಬೇಕಾದರೆ ಕೃಷಿ ವಿಜ್ಞಾನದಿಂದ ಮಾತ್ರ ಅದು ಸಾಧ್ಯ. ಕೃಷಿ ವಿಜ್ಞಾನ ಸಮರ್ಪಕ ಬಳಕೆ ಕುರಿತು ತಿಳುವಳಿಕೆ ಕೂಡ ಅಗತ್ಯವಾಗಿದ್ದು, ಅತಿಯಾದರೆ ಅಮೃತವೂ ಹಾಲಾಹಲ ಅನ್ನುವುದು ನಮಗೆಲ್ಲ ತಿಳಿದಿದೆ. ಬೆಳೆಗಳಿಗೆ ಅನೇಕ ರೀತಿಯ ಕೀಟ ಹಾಗೂ ರೋಗಗಳ ಬಾಧೆ ಹೆಚ್ಚಾಗಿದೆ. ಇವುಗಳನ್ನು ಹತೋಟಿಯಲ್ಲಿಡಲು ರೈತರು ರಾಸಾಯನಿಕಗಳನ್ನು ಬಳಸಿ ಬೆಳೆ ಬೆಳೆಸುವುದರಿಂದ ಜನರ ಆರೋಗ್ಯದ ಮೇಲೆ ಇದಲ್ಲದೆ ಸಾಕಷ್ಟು ಪರಿಣಾಮ ಬೀರುತ್ತಿದೆ ಎಂಬುದು ಜಗಜ್ಜಾಹೀರಾಗಿರುವ ಸತ್ಯ.
ರಾಸಾಯನಿಕಗಳನ್ನು ಬಳಸುವುದರಿಂದ ಪರಿಸರ ಮಾಲಿನ್ಯ ಉಂಟಾಗುವ ಸಂಭವವಿದೆ ಎಂಬ ಆರೋಪವೂ ಇದೆ. ಆದರೆ ಸಮಗ್ರ ಕೀಟ, ರೋಗ ಹಾಗೂ ಕಳೆ ಹತೋಟಿ ಕ್ರಮಗಳನ್ನು ಪಾಲಿಸುವುದರಿಂದ ಈ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಇದರಲ್ಲಿ ಮುಂಜಾಗ್ರತೆ ಕ್ರಮಗಳು, ಜೈವಿಕ, ನೈಸರ್ಗಿಕ ಹಾಗೂ ವಿವಿಧ ಬೇಸಾಯ ಕ್ರಮಗಳು ಇತ್ಯಾದಿ ಅಳವಡಿಸಿ ಕೊನೆಗೂ ರೋಗ, ಕೀಟಗಳ ಹತೋಟಿ ಆಗದಿದ್ದರೆ ಕೊನೆಗೆ ರಾಸಾಯನಿಕ ಬಳಕೆ ಮಾಡಬೇಕಾಗುತ್ತದೆ. ಆದರೆ ರಾಸಾಯನಿಕಗಳ ಬಳಕೆ ಬಗ್ಗೆ ನಾವು ಅರಿವು ಮೂಡಿಸಬೇಕಿದೆ.
ನೀರು ಕೃಷಿಯಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸುತ್ತದೆ. ನೀರಿನ ಅನುಕೂಲವಿದ್ದರೆ ಬೆಳೆಯಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಆದ್ದರಿಂದ ನೀರಾವರಿಯಲ್ಲಿ ನೀರಿನ ನಿರ್ವಹಣೆ ಬಹಳ ಮುಖ್ಯ. ಈಗೀಗ ನೀರಿನ ಸಮರ್ಥ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ಇದರಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇವುಗಳ ಉಪಯೋಗದಿಂದ ಅಧಿಕ ಲಾಭ ಪಡೆಯಬಹುದು. ಖುಷ್ಕಿ ಬೇಸಾಯ ಮತ್ತು ಜಲಾನಯನ ಅಭಿವೃದ್ಧಿಗೆ ಈಗ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಇದರಲ್ಲಿ ಅನೇಕ ಉಪಯುಕ್ತವಾದ ಸಂಶೋಧನಾ ಮಾಹಿತಿಗಳು ಲಭ್ಯವಿದ್ದು ಇವುಗಳನ್ನು ಅಳವಡಿಸಲು ರೈತರಿಗೆ ಶಿಫಾರಸು ಮಾಡಲಾಗಿದೆ. ಇದರಿಂದ ರೈತರು ಮಳೆ ಆಧಾರಿತ ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.
ಇಷ್ಟೇ ಅಲ್ಲದೇ ಸಾವಯವ ಕೃಷಿ ಇದೀಗ ಹೆಚ್ಚು ಪ್ರಚಾರದಲ್ಲಿದೆ. ಬರೀ ಸಾವಯವ ಕೃಷಿಯಿಂದ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಸಾಧ್ಯವಿಲ್ಲ ಎಂಬ ಉತ್ತರ ದೊರಕುತ್ತದೆ. ಸಸ್ಯ ನಿರ್ವಹಣೆ ಹಾಗೂ ಸಮಗ್ರ ಕೀಟ ರೋಗ ಹಾಗೂ ಕಳೆಗಳ ನಿರ್ವಹಣೆ ಬಗ್ಗೆ ಅರಿವು ಮೂಡಬೇಕಾದರೆ ಅದಕ್ಕೆ ಪೂರಕ ಮಾಹಿತಿ ಅಗತ್ಯ. ಆದ್ದರಿಂದ ಸಮಗ್ರ ಹತೋಟಿ ಕ್ರಮಗಳಿಂದ ನಾವು ನಮ್ಮ ಆಹಾರ ಉತ್ಪನ್ನದಲ್ಲಿ ಹೆಚ್ಚಿನ ಗುರಿ ಸಾಧಿಸಬಹುದಲ್ಲದೆ ಜನರ ಆರೋಗ್ಯವನ್ನೂ ಸಹ ಕಾಪಾಡ ಬಹುದು. ಇಂತಹ ಸರಳ ವಿಚಾರಗಳನ್ನು ಕೃಷಿಕರಿಗೆ ಮನವರಿಕೆ ಮಾಡಲು ನಾವು ಸಿದ್ಧರಾಗಿದ್ದು, ನಮ್ಮಿಂದಾಗಬಹುದಾದ ಪ್ರಯತ್ನ ನಾವು ಮಾಡಲಿದ್ದೇವೆ.
ಪ್ರಗತಿಪರ ಕೃಷಿಕರು ಹಲವಾರು ಜನರಿದ್ದರೂ ಅವರ ಸಾಧನೆಯ ಬಗ್ಗೆ ಅಥವಾ ಅವರ ಕೃಷಿ ಚಟುವಟಿಕೆಗಳ ಬಗ್ಗೆ ಇತರರಿಗೂ ಮಾಹಿತಿ ಲಭಿಸಿದರೆ ಇನ್ನಷ್ಟು ಕೃಷಿಕರಿಗೆ ಖಂಡಿತಾ ಉಪಯೋಗವಾಗಲಿದೆ. ಅಂತಹ ಪ್ರಗತಿಪರ ಕೃಷಿಕರ ಲೇಖನಗಳಿಗೆ ನಾವು ವೇದಿಕೆ ಒದಗಿಸುವ ಕಾರ್ಯ ಮಾಡಲಿದ್ದೇವೆ. ನಮ್ಮನ್ನು ಸಂಪರ್ಕಿಸಿ ನಮಗೆ ಕೃಷಿಯ ವಿಚಾರಗಳ ಲೇಖನಗಳನ್ನು ನೀಡಿದಲ್ಲಿ ಅದನ್ನು ಪರಿಶೀಲಿಸಿ ನಮ್ಮ ವೆಬ್ ಸೈಟ್ ನಲ್ಲಿ ಪ್ರಸಾರ ಮಾಡಲಿದ್ದೇವೆ.
ಕೊನೆಯದಾಗಿ,
ಸರ್ಕಾರವೇ ಜೈ ಜವಾನ್ ಜೈ ಕಿಸಾನ್ ಘೋಷ ವಾಕ್ಯಕ್ಕೆ ಪೂರಕವಾಗಿ ಹಲವು ಯೋಜನೆಗಳನ್ನು ಕೈಗೊಂಡಿದ್ದರೂ ತಳ ಮಟ್ಟದ ಕೃಷಿಕರಿಗೆ ಅದರ ಮಾಹಿತಿಯೇ ಇರುವುದಿಲ್ಲ. ಇದು ಬಲು ದೊಡ್ಡ ಸಮಸ್ಯೆಯಾಗಿದೆ. ಇದಿಷ್ಟೇ ಅಲ್ಲದೇ ತೋಟಗಾರಿಕಾ ಇಲಾಖೆಯಲ್ಲಿ ಸಿಗಬಹುದಾದ ಪ್ರಯೋಜನಗಳ ಬಗ್ಗೆಯೂ ಸಾಮಾನ್ಯ ಕೃಷಿಕರಿಗೆ ಕನಿಷ್ಠ ಮಾಹಿತಿಯೂ ಇರುವುದಿಲ್ಲ. ಇವುಗಳ ಮಾಹಿತಿ ತಲುಪಿಸಬೇಕಿರುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ಯಾಕೆಂದರೆ ಕೃಷಿಕ ಸಬಲನಾದರೆ ದೇಶವೂ ಸಬಲವಾಗಲಿದೆ. ಕೃಷಿಕರ ಲೋಕದ ಹಲವು ಸಮಸ್ಯೆಗಳನ್ನು ಮನಗಂಡು ಟೀಂ ನ್ಯೂಸ್ ಆ್ಯರೋ ಹೊಸದಾಗಿ ಕೃಷಿ ಲೋಕ ವೆಬ್ ಸೈಟ್ ಆರಂಭಿಸಿದ್ದೇವೆ. ನಿಮ್ಮ ಸಲಹೆ, ಸಹಕಾರಕ್ಕೆ ಸದಾ ಸ್ವಾಗತ. ನಿಮ್ಮ ಪ್ರೀತಿಯೇ ನಮಗೆ ಸ್ಪೂರ್ತಿ.
~ ಟೀಂ ನ್ಯೂಸ್ ಆ್ಯರೋ & ಕೃಷಿ ಲೋಕ