- ಕೃಷಿ ಸುದ್ದಿ
- July 21, 2023
- No Comment
- 1066
ಯುಪಿಯ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಿದೆ ಮುಖ್ಯಮಂತ್ರಿ ಖೇತ್ ಸುರಕ್ಷಾ ಯೋಜನೆ – ಏನಿದರ ವಿಶೇಷತೆ?

ಕೃಷಿ ಲೋಕ : ರಾಜ್ಯದ ರೈತರ ಸ್ಥಿತಿ ಸುಧಾರಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ರಮ ಕೈಗೊಂಡಿದ್ದಾರೆ. ಅದರಂತೆ ಬುಂದೇಲ್ ಖಂಡದಲ್ಲಿ ಮಾತ್ರ ಜಾರಿಯಲ್ಲಿದ್ದ ಮುಖ್ಯಮಂತ್ರಿ ಖೇತ್ ಸುರಕ್ಷಾ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಯೋಜನೆಗೆ 75 ಕೋಟಿ ರೂ. ಬದಲಾಗಿ 350 ಕೋಟಿ ರೂ. ಅನುದಾನ ಹೆಚ್ಚಳ ಮಾಡಲು ಸರಕಾರ ಮುಂದಾಗಿದೆ.
ಏನಿದು ಯೋಜನೆ?
ಪ್ರಾಣಿಗಳಿಂದ ಬೆಳೆಗಳನ್ನು ಸಂರಕ್ಷಿಸಲು ಸೋಲಾರ್ ಬೇಲಿ ಅಳವಡಿಸುವ ಯೋಜನೆ ಇದಾಗಿದೆ. ಈ ಬೇಲಿ ಮೂಲಕ ಕೇವಲ 12 ವೋಲ್ಟ್ ಗಳ ವಿದ್ಯುತ್ ಪ್ರವಹಿಸಲಾಗುತ್ತದೆ. ಇವು ಪ್ರಾಣಿಗಳಿಗೆ ಸೌಮ್ಯವಾದ ಆಘಾತವನ್ನು ಉಂಟು ಮಾಡುತ್ತವೆ ವಿನಾಃ ಹಾನಿಯುಂಟು ಮಾಡುವುದಿಲ್ಲ. ಮಾತ್ರವಲ್ಲ ಪ್ರಾಣಿ ಬೇಲಿಯನ್ನು ಸ್ಪರ್ಶಿಸಿದರೆ ಸೈರನ್ ಕೂಡ ಮೊಳಗುತ್ತದೆ.
ಈ ಯೋಜನೆಯಡಿ ಬೇಲಿ ಅಳವಡಿಸಲು ಸರಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ಹೆಕ್ಟೇರ್ ಗೆ ಶೇ. 60 ಅಥವಾ 1.43 ಲಕ್ಷ ರೂ. ಅನುದಾನವನ್ನು ನೀಡುತ್ತದೆ. ಈ ಯೋಜನೆಯ ಕರಡನ್ನು ಕೃಷಿ ಇಲಾಖೆ ಸಿದ್ಧಪಡಿಸಿದ್ದು, ಸಚಿವ ಸಂಪುಟ ಅನುಮೋದನೆಗೆ ಶೀಘ್ರ ಕಳುಹಿಸಲಿದೆ.
ಜೊತೆಗೆ ಗೋಮಾಳದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಪಶುಪಾಲನೆ ಮತ್ತು ಹೈನುಗಾರಿಕೆ ಇಲಾಖೆ ಜುಲೈ 11ರಿಂದ ಗೋಮಾಳ ಅಕ್ರಮ ಒತ್ತುವರಿ ಮುಕ್ತಗೊಳಿಸುವ ಅಭಿಯಾನ ನಡೆಸುತ್ತಿದೆ. ಆಗಸ್ಟ್ 25ರ ವರೆಗೆ ಅಬಿಯಾನ ಮುಂದುವರಿಯಲಿದೆ.