- ಕೃಷಿ ಉದ್ಯಮಮಾದರಿ ಕೃಷಿಕರು
- March 25, 2022
- No Comment
- 3112
ಲಾಭದಾಯಕ ಡ್ರ್ಯಾಗನ್ ಫ್ರೂಟ್ ಬೆಳೆಯೋದು ಹೇಗೆ? ಹೆಚ್ಚು ನೀರು ಬೇಕಿಲ್ಲದ, ನಿರ್ವಹಣೆ ಅತಿ ಸುಲಭವಾಗಿರುವ ಈ ಬೆಳೆಯನ್ನು ಬೆಳೆಯೋದು ಹೇಗೆ? – ವಿವರಣೆಗಾಗಿ ಓದಿ…

ಕೃಷಿ ಲೋಕ : ಆರೋಗ್ಯಕರ ಹಣ್ಣುಗಳ ಸಾಲಿನಲ್ಲಿ ಡ್ರ್ಯಾಗನ್ ಫ್ರೂಟ್ ಗೆ ವಿಶೇಷ ಸ್ಥಾನವಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಈ ಬೆಳೆಗೆ ಉತ್ತಮ ಬೇಡಿಕೆ ಇರುವುದರಿಂದ ಅನೇಕ ರೈತರು ಈ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ. ಆದರೆ ಭಾರತದಲ್ಲಿ ಹೆಚ್ಚಿನವರಿಗೆ ಡ್ರ್ಯಾಗನ್ ಫ್ರೂಟ್ ಬೆಳೆಯ ಬಗ್ಗೆ ಗೊತ್ತಿಲ್ಲ. ಹಾಗಾಗಿ ಇದು ಇನ್ನೂ ಪ್ರಚಲಿತಕ್ಕೆ ಅಷ್ಟಾಗಿ ಬಂದಿಲ್ಲ. ಡ್ರ್ಯಾಗನ್ ಫ್ರೂಟ್ ಬೆಳೆಯ ಬಗ್ಗೆ ಕೃಷಿಕರೊಬ್ಬರು ತಮ್ಮ ಅನುಭವದ ಬಗ್ಗೆ ಹೇಳಿದ್ದು, ಅದನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಬೀರವಾರದ ಪದವೀಧರ ದರ್ಶನ್ ಎಂಬುವವರು ಒಂದು ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯುವ ಮೂಲಕ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಅವರ ಕೃಷಿ ಅನುಭವ ಹೀಗಿದೆ.
ಏನಿದು ಡ್ರ್ಯಾಗನ್ ಫ್ರೂಟ್ಸ್? ಇದರ ಪ್ರಯೋಜನಗಳೇನು?:
ಡ್ರ್ಯಾಗನ್ ಫ್ರೂಟ್ಸ್ ತಿನ್ನಲು ರುಚಿಕರವಾಗಿರುವಂತಹ ಒಂದು ಜಾತಿಯ ಹಣ್ಣು. ಇದರಲ್ಲಿ ಔಷಧೀಯ ಗುಣಗಳೂ ಹೊಂದಿದ್ದು, ಹೀಗಾಗಿ ಇದು ಬಹುಬೇಡಿಕೆ ಹಣ್ಣಿಗಿದೆ. ಇದು ಹೆಚ್ಚು ನೀರಿನಾಂಶ, ಪ್ರೋಟೀನ್ ಒಮೆಗಾ-3, 6 ಹಾಗೂ ಕೊಬ್ಬಿನ ಆಮ್ಲಗಳಿಂದ ಸಮೃದ್ಧವಾಗಿದೆ. ಅಲ್ಲದೆ ಬಿ.ಪಿ, ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಗ್ಯಾಸ್ಟಿಕ್, ಕೊಲೆಸ್ಟ್ರಾಲ್ ಕಡಿಮೆಗೊಳಿಸುವಲ್ಲಿ ಸಹಾಯಕವಾಗಿದೆ.
ಜೊತೆಗೆ ನಮ್ಮ ದೇಹದಲ್ಲಿ ಬಿಳಿರಕ್ತಕಣಗಳನ್ನು ಹೆಚ್ಚಿಸುವಲ್ಲಿ ಮತ್ತು ಡೆಂಗಿ ಜ್ವರಕ್ಕೆ ಮತ್ತು ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಈ ಹಣ್ಣು ರಾಮಬಾಣವಿದ್ದಂತೆ. ಅಲ್ಲದೆ ಪ್ರಮುಖವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ಬಹಳ ಉತ್ತಮವಾಗಿದೆ. ಜೊತೆಗೆ ಇದರ ಸಿಪ್ಪೆ ತೆಗೆದು ಚರ್ಮ ಕಾಯಿಲೆ ಇರುವವರು 2 ರಿಂದ 3 ಬಾರಿ ಸ್ನಾನ ಮಾಡಿದರೆ ಚರ್ಮ ಕಾಯಿಲೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
ಡ್ರ್ಯಾಗನ್ ಫ್ರೂಟ್ ಬೆಳೆಯುವ ವಿಧಾನ ಹೇಗೆ?
ಡ್ರ್ಯಾಗನ್ ಫ್ರೂಟ್ ಬೆಳೆಯಲು ನೀವು ಮೊದಲಿಗೆ ಜಮೀನನ್ನು ಹದ ಗೊಳಿಸಿ, ಬದುಗಳನ್ನು ನಿರ್ಮಿಸಿಕೊಳ್ಳಬೇಕು. ಬಳಿಕ ಈ ಬದುಗಳ ಮೇಲೆ ಕಲ್ಲುಕಂಬ ನಿಲ್ಲಿಸಿ. ನಂತರ 1 ಕಂಬದ ಮೇಲೆ ಕಬ್ಬಿಣದ ಸರಳುಗಳನ್ನು ಜೋಡಿಸಿ. ಆದರೆ 1 ಕಂಬದಿಂದ ಇನ್ನೊಂದು ಕಂಬಕ್ಕೆ ಕನಿಷ್ಠ ಪಕ್ಷ 8 ಅಡಿ ಅಂತರವಿರಬೇಕು. ಅಲ್ಲದೇ ಒಂದು ಬದುವಿಂದ ಮತ್ತೊಂದು ಬದುವಿಗೆ 12 ಅಡಿ ಅಂತರ ಕಾಯ್ದುಕೊಳ್ಳಬೇಕು. ಈ ರೀತಿ ಮಾಡಿದ್ದಲ್ಲಿ 1 ಎಕರೆಗೆ ಸರಿಸುಮಾರು 500 ಕಂಬಗಳನ್ನು ನಿಲ್ಲಿಸಬಹುದು ಎಂದು ದರ್ಶನ್ ಹೇಳಿದ್ದಾರೆ.
ನಾಟಿ:
ಪ್ರತಿ ಕಂಬಕ್ಕೆ 4 ರಿಂದ 5 ಹಣ್ಣಿನ ಸಸಿಗಳಂತೆ ಒಟ್ಟು 2000ಕ್ಕೂ ಹೆಚ್ಚು ಕೆಂಪು, ಗುಲಾಬಿ ಬಣ್ಣದ ತುಂಡುಗಳನ್ನು ತಂದು ನಾಟಿ ಮಾಡಿದ್ದೇನೆ. ಇವುಗಳಿಗೆ ಹನಿ ನೀರಾವರಿ ಮೂಲಕ ನೀರನ್ನು ನೀಡುಲಾಗುತ್ತಿದ್ದು, ಒಂದು ಎಕರೆಗೆ ಸುಮಾರು 5 ರಿಂದ 6 ಲಕ್ಷ ಖರ್ಚು ಮಾಡಲಾಗಿದೆ.
ಇನ್ನು, 15 ರಿಂದ 18 ತಿಂಗಳ ಒಳಗೆ ಡ್ರ್ಯಾಗನ್ ಫ್ರೂಟ್ ಕಟಾವಿಗೆ ಬರುತ್ತದೆ. ಅಲ್ಲದೇ ಕಡಿಮೆ ನೀರಿನಲ್ಲಿ ಈ ಬೆಳೆ ಬೆಳೆಯಬಹುದಾಗಿದ್ದು, ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರಗಳನ್ನು ಅಗತ್ಯಕ್ಕೆ ತಕ್ಕಷ್ಟು ಪೂರೈಸಿದರೆ ಸಾಕು. ಜೊತೆಗೆ 1 ಸಸಿಗೆ 60 ರೂ. ನೀಡಿ ಮಹಾರಾಷ್ಟ್ರದಿಂದ ತಂದಿರುವುದಾಗಿ ರೈತ ಹೇಳಿದ್ದು, ಸ್ವಲ್ಪ ತಡ ಎನಿಸಿದರೂ ಉತ್ತಮ ಫಸಲು ಬರುವ ನಿರೀಕ್ಷೆಯಿದೆ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಡ್ರ್ಯಾಗನ್ ಫ್ರೂಟ್ ನ ನಿರ್ವಹಣೆ:
• ಈ ಬೆಳೆಗೆ ಹೆಚ್ಚು ನೀರು ಬೇಕಾಗಿಲ್ಲ, ಕಡಿಮೆ ನೀರಿನಲ್ಲಿ ಈ ಬೆಳೆಯನ್ನು ಬೆಳೆಯಬಹುದಾಗಿದೆ.
• ಬೇಸಿಗೆ ಕಾಲದಲ್ಲಿ ಒಂದು ಗಿಡಕ್ಕೆ ಒಂದು ವಾರಕ್ಕೆ ಕನಿಷ್ಠ 10 ಲೀಟರ್ ನೀರು ನೀಡದರೂ ಸಾಕಾಗುತ್ತದೆ.
• ಒಮ್ಮೆ ಸಸಿ ನೆಟ್ಟ ನಂತರದಲ್ಲಿ ಇದರ ನಿರ್ವಹಣೆ ಸುಲಭವಾಗಿದೆ.
• ಬಹುಮುಖ್ಯವಾಗಿ ಡ್ರ್ಯಾಗನ್ ಫ್ರೂಟ್ ಗಿಡಕ್ಕೆ ಯಾವುದೇ ರೀತಿಯ ಕೀಟ-ರೋಗ ಸಮಸ್ಯೆಗಳು ಬಾದಿಸುವುದು ತೀರಾ ಕಡಿಮೆ.
• ಅಲ್ಲದೇ ನಿರಂತರ ಆದಾಯವನ್ನು ನೀಡುತ್ತದೆ.

ಡ್ರ್ಯಾಗನ್ ಫ್ರೂಟ್ ನ ಮಾರುಕಟ್ಟೆ:
ಡ್ರ್ಯಾಗನ್ ಹಣ್ಣಿಗೆ ಆಸ್ಟ್ರೇಲಿಯಾ, ಶ್ರೀಲಂಕಾ, ಥೈಲ್ಯಾಂಡ್, ಅಮೆರಿಕಾ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಈಗ ಮಾರುಕಟ್ಟೆಯಲ್ಲಿ 1 ಕೆಜಿ ಡ್ರ್ಯಾಗನ್ ಪ್ರೂಟ್ಸ್‌ಗೆ 180 ರಿಂದ 250 ರೂ. ವರೆಗೆ ಬೆಲೆಯಿದ್ದು, ಮುಂಬೈ, ಬೆಂಗಳೂರು, ಮಹಾರಾಷ್ಟ ಮುಂತಾದ ಕಡೆಗಳಿಂದ ಖರೀದಿದಾರರು ಬರುತ್ತಾರೆ ಎಂದು ದರ್ಶನ್ ಮಾಹಿತಿ ನೀಡಿದ್ದಾರೆ