- ಕೃಷಿ ಉದ್ಯಮ
- September 30, 2022
- No Comment
- 498
ಸಪೋಟ ಅಥವಾ ಚಿಕ್ಕು ಕೃಷಿ ಮಾಡಿದ್ರೆ ವರ್ಷ ಪೂರ್ತಿ ಹಣ ಗಳಿಸಬಹುದು – ಇದರ ನಿರ್ವಹಣೆಯೂ ಕಷ್ಟವಲ್ಲ : ವಿವರಗಳಿಗಾಗಿ ಈ ವರದಿ ಓದಿ..

ನ್ಯೂಸ್ ಆ್ಯರೋ : ಚಿಕ್ಕು ಅಥವಾ ಸಪೋಟ ಪ್ರಮುಖ ಹಣ್ಣುಗಳಲ್ಲೊಂದು. ಇದು ದೀರ್ಘಕಾಲಿಕ ಬೆಳೆ ಕೂಡ ಹೌದು. ಚೆನ್ನಾಗಿ ಬಿಸಿಲು ಬೀಳುವ ಪ್ರದೇಶಗಳಲ್ಲಿ ಸಪೋಟ ಕೃಷಿ ಮಾಡಬಹುದು. ಇದು ಹಲವು ವರ್ಷಗಳ ಕಾಲ ಇಳುವರಿ ನೀಡುತ್ತದೆ. ಇತರ ಕೃಷಿಗೆ ಹೋಲಿಸಿದರೆ ಇದರ ನಿರ್ವಹಣೆ ಸುಲಭ. ಕೊಯ್ಲು ಮಾಡುವ ವೇಳೆ ಕಾಯಿಗಳಿಗೆ ಪೆಟ್ಟಾಗದಂತೆ ಎಚ್ಚರ ವಹಿಸಬೇಕಾದ್ದು ಅಗತ್ಯ.

ಸಪೋಟ ಮಧ್ಯಮ ಗಾತ್ರದ ಮರವಾಗಿದ್ದು, ತಿಳಿ ಹಸುರು ಬಣ್ಣದ ಎಲೆಗಳನ್ನು ಹೊಂದಿವೆ. ಉರುಟು ಅಥವಾ ಅಂಡಾಕಾರದ ಕಾಯಿ ಗಳನ್ನು ಬಿಡುತ್ತವೆ. ಹಣ್ಣಿನಲ್ಲಿ 2ರಿಂದ 6ರ ವರೆಗೆ ಕಪ್ಪು ಬಣ್ಣದ ಬೀಜಗಳಿರುತ್ತವೆ.
ವೈಜ್ಞಾನಿಕವಾಗಿ ಇದು ಸಪೋಟೆಸಿ ಕುಟುಂಬಕ್ಕೆ ಸೇರಿದ್ದು, ಸಸ್ಯಶಾಸ್ತ್ರದಲ್ಲಿ ಮಣಿಕರ ಸಪೋಟ ((Manikara zapota)ಎಂದು ಕರೆಯಲಾಗುತ್ತದೆ. ಸಪೋಟದ ಮೂಲ ವೆಸ್ಟ್ ಇಂಡೀಸ್ ಹಾಗೂ ಮೆಕ್ಸಿಕೋ ಎನ್ನಲಾಗಿದೆ.

ಕರ್ನಾಟಕದ ಕರಾವಳಿ ಹಾಗೂ ಒಳನಾಡಿನಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿ ಪ್ರಸಿದ್ಧಿ ಪಡೆದಿದೆ. ಇದರಲ್ಲಿ ವಿಟಮಿನ್ ಸಿ ಹಾಗೂ ಸಕ್ಕರೆ ಅಂಶ ಅಧಿಕ ಪ್ರಮಾಣದಲ್ಲಿದೆ.
ಕೃಷಿ ಹೇಗೆ ?
ಸಪೋಟ ಸ್ವಲ್ಪ ದೊಡ್ಡ ಗಿಡವಾಗಿರುವುದರಿಂದ ಮತ್ತು ಬೇರುಗಳು ಹೆಚ್ಚು ಆಳದವರೆಗೆ ಹೋಗುವುದರಿಂದ ದೊಡ್ಡ ಗಾತ್ರದ ಪಾಟ್ ಗಳಲ್ಲಿ ಇದನ್ನು ಬೆಳೆಸಬಹುದು. ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಿ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ವಾರ ಬಿಟ್ಟು ಬಳಿಕ ಬೀಜ ಬಿತ್ತಬೇಕು.

ನರ್ಸರಿಗಳಿಂದ ಕಸಿ ಕಟ್ಟಿದ ಸಸಿಯನ್ನೂ ತಂದೂ ನೆಡಬಹುದು. ಗಿಡಕ್ಕೆ ನೀರು, ಗೊಬ್ಬರ, ಸೊಪ್ಪು ಹಾಕುವುದು ಉತ್ತಮ. ಆರಂಭದಲ್ಲಿ 15 ದಿನ ನಿರಂತರ ನೀರುಣಿಸುತ್ತಿರಬೇಕು. ಬಳಿಕ ಎರಡು-ಮೂರು ದಿನಗಳಿಗೊಮ್ಮೆ ನೀರು ಹಾಕಿದರೆ ಸಾಕು.
ಪ್ರತಿ ಎರಡರಿಂದ ಮೂರು ತಿಂಗಳುಗಳಿಗೊಮ್ಮೆ ಸಾವಯವ ಗೊಬ್ಬರ ಹಾಕಿದರೆ ಉತ್ತಮ ಇಳುವರಿ ಪಡೆಯಲು ಸಹಕಾರಿ. ಸಾಮಾನ್ಯವಾಗಿ ಚಿಕ್ಕು ನಾಟಿ ಮಾಡಿದ 3 ವರ್ಷಗಳಲ್ಲಿ ಫಸಲು ಲಭಿಸುತ್ತದೆ. ಕಸಿ ತಳಿಗಳಾದರೆ ಇನ್ನೂ ಬೇಗನೆ ದೊರೆಯಬಹುದು.
ಇದಕ್ಕೆ ಎಲೆಚುಕ್ಕಿ ರೋಗ, ಕಾಂಡ ಕೊರಕ, ಹಣ್ಣು ಕೊರಕ, ಬಿಳಿಹೇನು, ಕರಿಹೇನು, ತಿಗಣೆ ಮೊದಲಾದ ರೋಗ, ವಿವಿಧ ತರಹದ ಕೀಟ ಬಾಧೆ ತಡೆಯಲು ಬೋಡೋ ಮಿಶ್ರಣ, ಜೀವಾಮೃತ ಸಿಂಪಡಣೆ ಮಾಡಬಹುದು.
ತಳಿಗಳು
ಸ್ಥಳೀಯ ತಳಿ, ಅಲಹಾಬಾದ್, ಕಾಳಿಪಟ್ಟಿ, ಕ್ರಿಕೆಟ್ ಬಾಲ್, ಡಿಎಚ್‌ಎಸ್- 1,2, ಸಿಒ- 1 ಇತ್ಯಾದಿಗಳು ಪ್ರಮುಖ ಸಪೋಟ ತಳಿಗಳಾಗಿವೆ.
ಮಣ್ಣು ಮತ್ತು ಹವಾಗುಣ
ಸಾಮಾನ್ಯವಾಗಿ ಇದನ್ನು ಎಲ್ಲ ನಮೂನೆಯ ಮಣ್ಣಲ್ಲೂ ಬೆಳೆಯ ಬಹುದು. ಆದರೆ ಕೆಂಪು ಗೊಡ್ಡು ಮಣ್ಣು, ಫಲವತ್ತಾದ ಕಪ್ಪು ಮಣ್ಣು ಇದರ ಕೃಷಿಗೆ ಸೂಕ್ತ. ನೀರು ಇಂಗಿ ಹೋಗುವಂತಿರಬೇಕು. ಸಮಶೀತೋಷ್ಣದ ಹವಾಗುಣ, ಚೆನ್ನಾಗಿ ಬಿಸಿಲು ಬೀಳುವ ಪ್ರದೇಶ ಸಪೋಟ ಬೆಳೆಗೆ ಉತ್ತಮ.