- ಸರ್ಕಾರಿ ಯೋಜನೆಗಳು
- July 6, 2022
- No Comment
- 3319
ಪಿಎಂ ಕಿಸಾನ್ : ಈ ನಿಯಮ ಪಾಲಿಸದಿದ್ದರೆ ನಿಮಗೆ 12ನೇ ಕಂತು ಸಿಗಲ್ಲ…!!

ನ್ಯೂಸ್ ಆ್ಯರೋ : ಪಿಎಂ ಕಿಸಾನ್ ಯೋಜನೆಯಿಂದ ಅದೆಷ್ಟೋ ಮಂದಿ ರೈತರಿಗೆ ಉಪಯೋಗವಾಗುತ್ತಿದೆ. 31 ಮೇ 2022 ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು 10 ಕೋಟಿ ರೈತರ ಖಾತೆಗಳಿಗೆ 2000 ಕೋಟಿ ರೂಪಾಯಿ ಆರ್ಥಿಕ ನೆರವನ್ನು ವರ್ಗಾಯಿಸಿದ್ದಾರೆ. ಈ ಯೋಜನೆಯಡಿ 11 ನೇ ಕಂತು ಇದಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮುಖಾಂತರ ಕೇಂದ್ರ ಸರ್ಕಾರ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ಭಾರತೀಯ ಪ್ರಜೆಗಳಾದ ಎಲ್ಲಾ ಸಣ್ಣ ಮತ್ತು ಅತಿಸಣ್ಣ ರೈತರು ಇದಕ್ಕೆ ಅರ್ಹರಾಗಿರುತ್ತಾರೆ. ಈಗ ಜನರು 12 ನೇ ಕಂತುಗಾಗಿ ಕಾಯಲು ಪ್ರಾರಂಭಿಸಿದ್ದಾರೆ.
ಆದರೆ ಈ ಯೋಜನೆಯಡಿಯಲ್ಲಿ ಹಲವರು ನಕಲಿ ದಾಖಲೆಗಳನ್ನು ನೀಡಿ ವರ್ಷಕ್ಕೆ 6,000 ರುಪಾಯಿಗಳನ್ನು ಪಡೆದಿರುವ ಬಗ್ಗೆ ರಾಜ್ಯಗಳು ವರದಿ ಮಾಡಿದ್ದು, ಈ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು, ಅರ್ಹರಿಗೆ ಮಾತ್ರ ಯೋಜನೆಯ ಹಣ ದೊರೆಯುವಂತೆ ಮಾಡಲು ಹಲವು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಆ ನಿಯಮಗಳನ್ವತ ಯೋಜನೆಯ ಸೌಲಭ್ಯ ಪಡೆಯ ಬಹುದಾಗಿದ್ದು, 12 ನೇ ಕಂತು ಪಡೆಯಲು ಏನು ಮಾಡಬೇಕೆಂಬ ಮಾಹಿತಿ ಇಲ್ಲಿದೆ.
ಆರಂಭದಲ್ಲಿ 5 ಎಕರೆ ಕೃಷಿಯೋಗ್ಯ ಭೂಮಿ ಹೊಂದಿರುವ ರೈತರು ಮಾತ್ರ ಯೋಜನೆಯಡಿ ಹಣ ಪಡೆಯಲು ಅರ್ಹರು ಎಂದು ಪರಿಗಣಿಸಲಾಗಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಈ ನಿಯಮ ತೆಗೆದುಹಾಕಿದ್ದು, 14.5 ಕೋಟಿ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಲಿದ್ದಾರೆ.
ಪಡಿತರ ಚೀಟಿ ವಿವರ ಕಡ್ಡಾಯ
ಹೊಸ ನಿಯಮದ ಪ್ರಕಾರ, ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸುವಾಗ ಎಲ್ಲಾ ರೈತರು ತಮ್ಮ ಪಡಿತರ ಚೀಟಿ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ಯೋಜನೆಗೆ ನೋಂದಾಯಿಸುವಾಗ ನಿಮ್ಮ ಪಡಿತರ ಚೀಟಿಯ ಪ್ರತಿಯನ್ನು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಈಗ ಯಾರು ತಮ್ಮ ಅರ್ಜಿಯಲ್ಲಿ ಪಡಿತರ ಚೀಟಿಯ ವಿವರಗಳನ್ನು ನಮೂದಿಸುತ್ತಾರೋ ಅವರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗುತ್ತದೆ.
ಆಧಾರ್ ಕಾರ್ಡ್ ಕಡ್ಡಾಯ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ನೀಡಲು ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯ. ಆಧಾರ್ ಇಲ್ಲದೆ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಯೋಜನೆಯಲ್ಲಿ ನೋಂದಣಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಲೆಕ್ಕಪರಿಶೋಧಕರು, ಕಾಂಪೌಂಡರ್ ಮತ್ತು ಕೃಷಿ ಅಧಿಕಾರಿಗಳ ಬಳಿ ಹೋಗುವುದು ತಪ್ಪುತ್ತದೆ. ಈಗ ರೈತರು ಸುಲಭವಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ನೀವು ಖಾತೆ ಸಂಖ್ಯೆ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿದ್ದರೆ, pmkisan.nic.inನಲ್ಲಿ ಫಾರ್ಮರ್ಸ್ ಕಾರ್ನರ್‌ಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳಬಹುದು. ನಮೂದಿಸಿದ ವಿವರಗಳಲ್ಲಿ ತಪ್ಪಾಗಿದ್ದರೆ ತಿದ್ದುಪಡಿ ಮಾಡುವ ಅವಕಾಶ ಕೂಡ ಇದೆ.
ಇ ಕೆವೈಸಿ ಕಡ್ಡಾಯ
ಪಿಎಂ ಕಿಸಾನ್ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸಲು ಅರ್ಹ ರೈತರು ಇಕೆವೈಸಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಪಿಎಂ-ಕಿಸಾನ್ ನೋಂದಾಯಿತ ರೈತರಿಗೆ ಇಕೆವೈಸಿ ಕಡ್ಡಾಯವಾಗಿದೆ. ಒಟಿಪಿ ಆಧಾರಿತ ಇಕೆವೈಸಿ ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಇಕೆವೈಸಿ ಮಾಡಲು ಜುಲೈ 31 ಕೊನೆಯ ದಿನಾಂಕವಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ಸೇರಿಸಲಾಗಿದೆ. ಪಿಎಂ ಕಿಸಾನ್‌ನ ಫಲಾನುಭವಿಗಳು ಸುಲಭವಾಗಿ ಕೆಸಿಸಿ ಮಾಡಿಸಿಕೊಳ್ಳಬಹುದು. ಕೆಸಿಸಿಯಲ್ಲಿ ಶೇ.4ರ ದರದಲ್ಲಿ ರೈತರು 3 ಲಕ್ಷ ರೂ. ವರೆಗೆ ಸಾಲ ಪಡೆಯಬಹುದಾಗಿದೆ.
ಕಂತಿನ ಮಾಹಿತಿಯೂ ಲಭ್ಯ
ನೋಂದಣಿ ಬಳಿಕ ರೈತರು ತಮ್ಮ ಸ್ಟೇಟಸ್ ಪರಿಶೀಲನೆ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಇನ್ನು ಮುಂದೆ ರೈತರೇ ತಮ್ಮ ಅರ್ಜಿಯ ಸ್ಟೇಟಸ್ ಪರಿಶೀಲನೆ ಮಾಡಬಹುದು. ಜೊತೆಗೆ ರೈತರೇ ಬ್ಯಾಂಕ್ ಖಾತೆಗೆ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಬಹುದಾಗಿದ್ದು, ಪಿಎಂ ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡಿ ರೈತರು ತಮ್ಮ ಮೊಬೈಲ್ ಅಥವಾ ಬ್ಯಾಂಕ್ ಅಕೌಂಟ್ ನಂಬರ್ ನಮೂದಿಸುವ ಮೂಲಕ ಮಾಹಿತಿ ಪಡೆಯಬಹುದು.