- ಸರ್ಕಾರಿ ಯೋಜನೆಗಳು
- December 1, 2022
- No Comment
- 2322
ರೈತರಿಗೆ ವರದಾನವಾದ ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ’ – ಈ ಯೋಜನೆಯಲ್ಲಿ ಸ್ಪ್ರಿಂಕ್ಲರ್ ಅಳವಡಿಕೆಗೆ ಸಿಗಲಿದೆ ಶೇ.90 ಸಹಾಯಧನ ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಕೃಷಿ ಲೋಕ: ಹೊಲದಲ್ಲಿ ಬೆಳೆ ಬೆಳೆದರೆ ಅದರ ಹಿಂದೆ ರೈತನ ಬೆವರಿನ ಶ್ರಮ ಅಡಗಿರುತ್ತದೆ. ರೈತ ಹೊಲವನ್ನು ಉಳುಮೆ ಮಾಡಿ, ಬಿತ್ತನೆ ಮಾಡಿ, ಅಗತ್ಯಕ್ಕೆ ತಕ್ಕಂತೆ ನೀರುಣಿಸಿದರಷ್ಟೇ ಹೊಲ ಹಸಿರಿನಿಂದ ಕಂಗೊಳಿಸಲು ಸಾಧ್ಯ. ಇತ್ತೀಚೆಗೆ ಹಲವು ಸುಧಾರಿತ ತಳಿಗಳು ಬಂದಿದ್ದರೂ, ರೈತನ ಶ್ರಮ ಬೇಕೇಬೇಕು. ಇದಲ್ಲಕ್ಕೂ ಮಿಗಿಲಾಗಿ ಎಲ್ಲ ಬೆಳೆಗಳಿಗೂ ನೀರಾವರಿ ಪ್ರಮುಖ ಪಾತ್ರ ವಹಿಸುತ್ತದೆ. ಭತ್ತ, ಅಡಿಕೆ ಯಂತಹ ಬೆಳೆಗಳಿಗೆ ಹೆಚ್ಚು ನೀರು ಬೇಕಾಗುತ್ತದೆ.
ಆದರೆ, ಭಾರತದಲ್ಲಿ ಇಂದಿಗೂ ಉತ್ತಮ ನೀರಾವರಿ ವ್ಯವಸ್ಥೆ ಮರೀಚಿಕೆ ಆಗಿದೆ. ಇಂದಿಗೂ, ಲಕ್ಷಾಂತರ ರೈತರು ಮಳೆ ನೀರನ್ನೇ ಆಧರಿಸಿದ್ದಾರೆ. ಏಕೆಂದರೆ, ಭಾರತದಲ್ಲಿ ನೀರಿನ ಹಂಚಿಕೆ ಎಲ್ಲ ಕಡೆಯೂ ಸಮಾನವಾಗಿಲ್ಲ. ಕೆಲವೆಡೆ ನೀರು ಸಮೃದ್ಧವಾಗಿದ್ದು, ಸಮುದ್ರ ಸೇರುತ್ತಿದ್ದರೆ, ಕೆಲವೆಡಿ ಕುಡಿಯುವ ನೀರಿಗೂ ಕೊರತೆಯಿದೆ. ರೈತರು ನೀರಾವರಿಯಲ್ಲಿ ತಂತ್ರಜ್ಞಾನ ಬಳಸುವ ಮೂಲಕ ಇದಕ್ಕೆ ಪರಿಹಾರ ಕಡುಕೊಳ್ಳಬಹುದು. ಇದರಿಂದ ನೀರಿನ ಉಳಿತಾಯ ಆಗುವ ಜತೆಗೆ ಇಳುವರಿಯೂ ಉತ್ತಮವಾಗಿರುತ್ತದೆ. ಇದರಿಂದಾಗಿ ಆದಾಯವೂ ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೃಷಿ ಭೂಮಿಗೆ ನೀರಿನ ಕೊರತೆಯಾಗದಂತೆ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ’ ಆರಂಭಿಸಿದೆ.
ಕೃಷಿ ತಜ್ಞರ ಪ್ರಕಾರ ಸ್ಪ್ರಿಂಕ್ಲರ್ ವಿಧಾನದಲ್ಲಿ ನೀರಾವರಿ ಮಾಡಿದರೆ ಕಡಿಮೆ ನೀರಲ್ಲೂ ಉತ್ತಮ ಫಸಲು ಪಡೆಯಬಹುದು. ಇದಕ್ಕಾಗಿ ಸ್ಪ್ರಿಂಕ್ಲರ್ ಉಪಕರಣಗಳನ್ನು ಖರೀದಿಸಲು ಸರ್ಕಾರ ಸಹಾಯ ಧನವನ್ನೂ ನೀಡುತ್ತಿದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಎಂದರೇನು?
ರೈತರಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಈ ಯೋಜನೆಯಲ್ಲಿ ಐವತ್ತು ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಿದೆ. ಸ್ಪ್ರಿಂಕ್ಲರ್ ವಿಧಾನದ ನೀರಾವರಿಗೆ ಸರ್ಕಾರ ಒಟ್ಟು ವೆಚ್ಚದ ಶೇ. 80 ರಿಂದ 90 ರಷ್ಟು ಸಹಾಯಧನ ನೀಡುತ್ತದೆ. ಈ ವಿಧಾನದಿಂದ, ಹೊಲವನ್ನು ಸಮತಟ್ಟು ಮಾಡದೆಯೇ ನೀರಾವರಿ ಮಾಡಬಹುದು. ಈ ವಿಧಾನವು ಇಳಿಜಾರುಗಳಲ್ಲಿ ಅಥವಾ ಕಡಿಮೆ ಎತ್ತರದಲ್ಲಿ ಬಹಳ ಪರಿಣಾಮಕಾರಿಯಾಗುತ್ತಿದೆ.
ಅರ್ಹತೆ ಏನು?
ಬೇಸಾಯಕ್ಕೆ ಯೋಗ್ಯವಾದ ಭೂಮಿ ಹೊಂದಿರುವ ಎಲ್ಲ ರೈತರು ಈ ಯೋಜನೆಗೆ ಅರ್ಹರಾಗಿದ್ದಾರೆ.
ಕೃಷಿಗೆ ಸಂಬಂಧಿಸಿದ ಎಲ್ಲಾ ಮಾನ್ಯತೆ ಪಡೆದ ಸಂಸ್ಥೆಗಳು ಸಹ ಈ ಯೋಜನೆಯ ಪ್ರಯೋಜನ ಪಡೆಯುತ್ತವೆ.
ಉದಾ: ಸ್ವಸಹಾಯ ಗುಂಪುಗಳು, ಟ್ರಸ್ಟ್‌ಗಳು, ಸಹಕಾರ ಸಂಘಗಳು, ಇತ್ಯಾದಿ.
ಗುತ್ತಿಗೆ ಆದಾರದಲ್ಲಿ ಬೇಸಾಯ ಮಾಡುವ ರೈತರೂ, ಈ ಯೋಜನೆಯ ಲಾಭ ಪಡೆಯಬಹುದು. ಆದರೆ, ಭೂಮಿಯನ್ನು ಕನಿಷ್ಠ 7 ವರ್ಷಗಳ ಕಾಲ ಗುತ್ತಿಗೆ ಪಡೆದು ಬೇಸಾಯ ಮಾಡಬೇಕು.
ಈ ದಾಖಲೆಗಳು ಅಗತ್ಯ
- ಆಧಾರ್ ಕಾರ್ಡ್
- ಗುರುತಿನ ಚೀಟಿಗಾಗಿ ಯಾವುದೇ ಪ್ರಮಾಣಪತ್ರ
- ಭೂಮಿಗೆ ಸಂಬಂದಿಸಿದ ದಾಖಲೆಗಳು
- ಜಮೀನಿನ ಜಮಾಬಂದಿ
- ಬ್ಯಾಂಕ್ ಖಾತೆ ವಿವರಗಳು
- ಪಾಸ್ ಪೋರ್ಟ್ ಗಾತ್ರದ ಫೋಟೋ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಕೆ ಹೇಗೆ?
PMKSY ಯೋಜನೆಯಡಿ ಪ್ರಯೋಜನ ಪಡೆಯಲು ಬಯಸುವ ಮತ್ತು ನೀರಿನ ಸಂಪನ್ಮೂಲಗಳನ್ನು ವ್ಯರ್ಥ ಮಾಡದೆ ಅನೇಕ ಬೆಳೆ ಬೆಳೆಯಲು ಬಯಸುವ ರೈತರು ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದು. ಈ ಕೆಳಗೆ ತಿಳಿಸಿರುವ ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
- ಮೊದಲಿಗೆ pmksy.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ ಲಾಗಿನ್ ಬಟನ್ ಕ್ಲಿಕ್ ಮಾಡಿ.
- ನಿಮ್ಮ ಹೆಸರು ಮತ್ತು ಇಮೇಲ್ ಐಡಿ ಮೂಲಕ ನೀವು ಲಾಗಿನ್ ಮಾಡಬಹುದು.
- ಈಗ ಸಂಬಂಧಿತ ಲಿಂಕ್ ಅನ್ನು ಆಯ್ಕೆ ಮಾಡಿ.
- ಪಿಡಿಎಫ್ ಮಾರ್ಗಸೂಚಿಯಿಂದ ಮಾಹಿತಿಯನ್ನು ಪಡೆಯಿರಿ ಮತ್ತು ಅದರಲ್ಲಿ ತಿಳಿಸಿರುವ ಪ್ರಕಾರ ನೋಂದಣಿ ಪೂರ್ಣಗೊಳಿಸಿ.
ಸ್ಪ್ರಿಂಕ್ಲರ್ ವಿಧಾನದಿಂದ ಯಾವ ಬೆಳೆ ಬೆಳೆಯಬಹುದು?
ಆಲೂಗಡ್ಡೆ, ಅವರೆಕಾಳು, ಈರುಳ್ಳಿ, ಕೋಸುಗಡ್ಡೆ, ಸ್ಟ್ರಾಬೆರಿ, ನೆಲಗಡಲೆ, ಸಾಸಿವೆ, ಎಲೆಯ ತರಕಾರಿ, ನಾಡಿ, ಚಹಾ, ಶುಂಠಿ, ಹೂ ಕೋಸು, ಎಲೆಕೋಸು, ಬೆಳ್ಳುಳ್ಳಿ ಇತ್ಯಾದಿ ಬೆಳೆಗಳನ್ನು ಬೆಳೆಯಬಹುದಾಗಿದೆ.