- ತೋಟಗಾರಿಕೆಮಾದರಿ ಕೃಷಿಕರು
- January 21, 2022
- No Comment
- 1206
ಅಳಿವಿನಂಚಿನಲ್ಲಿರುವ ನಾಗಲಿಂಗ ವೃಕ್ಷದ ಬಗ್ಗೆ ನಿಮಗೆ ಗೊತ್ತಾ…!? ಅಳಿವಿನಂಚಿನಲ್ಲಿರುವ ಈ ಅಪರೂಪದ ಈ ವೃಕ್ಷದ ವೃಕ್ಷದ ಬಗ್ಗೆ ತಿಳಿಯಲು ಹಾಗೂ ಗಿಡ ಉಚಿತವಾಗಿ ಪಡೆಯಲು ಈ ವರದಿ ಓದಿ…

ಕೃಷಿಲೋಕ: ಆಧುನಿಕರಣಗೊಳ್ಳುತ್ತಿರುವ ತಂತ್ರಜ್ಞಾನ ಯುಗದಲ್ಲಿ ಅದೆಷ್ಟೋ ಜೀವರಾಶಿಗಳು ಅಳಿದು ಹೋಗಿದ್ದು, ಅಳಿವಿನ ಅಂಚಿನಲ್ಲಿ ಇನ್ನು ಅನೇಕ ಜೀವರಾಶಿಗಳು ಇವೆ. ಅವುಗಳಲ್ಲಿ ಈ ನಾಗಲಿಂಗ ವೃಕ್ಷವು ಒಂದು. ತನ್ನದೇ ಅದ ವಿಶೇಷತೆಯನ್ನು ಈ ಮರ ಹೊಂದಿದ್ದು, ನಿಡ್ಡೋಡಿಯ ವಿನೇಶ್ ಪೂಜಾರಿ ಎನ್ನುವವರು ಇವುಗಳ ರಕ್ಷಣೆಗೆ ಅಡಿಪಾಯ ಹಾಕಿದವರು.
ಒಂದು ಬಾರಿ ವಿನೇಶ್ ಅವರಿಗೆ ಅಪರೂಪವಾಗಿ ಕಂಡ ಈ ಮರ ಏನೋ ವಿಶೇಷತೆ ಅನ್ನಿಸಿತು. ಕೆಲವೇ ಕಡೆ ಮಾತ್ರ ನೋಡಲು ಲಭ್ಯವಾದ ಈ ಮರದ ತಳಿಯನ್ನು ಉಳಿಸುವ ಪಣ ತೊಟ್ಟ ವಿನೇಶ್ ಅವುಗಳ ಬೀಜವನ್ನು ಸಂಗ್ರಹಣೆ ಮಾಡುತ್ತ 500ಕ್ಕೂ ಹೆಚ್ಚು ನಾಗಲಿಂಗ ಗಿಡಗಳನ್ನು ಸ್ವತಃ ತಾವೇ ಬೆಳೆಸಿದರು. ಇದೀಗ ಅಪರೂಪದ ಈ ವೃಕ್ಷದ ಗಿಡ ಬೆಳೆಸಿ ದೇವಸ್ಥಾನಗಳಿಗೆ ಉಚಿತವಾಗಿ ನೀಡುವಷ್ಟರ ಮಟ್ಟಿಗೆ ವಿನೇಶ್ ಪೂಜಾರಿ ನಿಡ್ಡೋಡಿ ಅವರು ಅವುಗಳ ರಕ್ಷಣೆ ಮಾಡಿದ್ದಾರೆ.

ನಾಗಲಿಂಗ ವೃಕ್ಷದ ವಿಶೇಷತೆ..
ಈ ಮರವು ದೊಡ್ಡ ಗಾತ್ರದಲ್ಲಿ ಬೆಳೆಯುತ್ತದೆ ಹಾಗೂ ಕಾಂಡದಿಂದ ತುದಿಯ ವರೆಗೂ ತುಂಬಾ ಬೀಳಲುಗಳನ್ನು ಹೊಂದಿದ್ದು ಬೀಳಲುಗಳಲ್ಲಿ ಹೂವು ಬಿಟ್ಟು, ದೊಡ್ಡ ದೊಡ್ಡ ಗಾತ್ರದ ಕಾಯಿ ಬಿಡುತ್ತದೆ. ಇದರ ಹೂವು 6 ದಳಗಳಿಂದ ಕೂಡಿದ್ದು ಇದರ ದಳದ ಕೆಳಭಾಗ ಹಳದಿ ಬಣ್ಣದಲ್ಲಿರುತ್ತದೆ, ಹೂವಿನ ಮಧ್ಯ ಭಾಗದಲ್ಲಿ ಲಿಂಗಾಕೃತಿಯನ್ನು ಹೊಂದಿದ್ದು ಲಿಂಗಕ್ಕೆ ಹಾವಿನ ಹೆಡೆಯಂತೆ ಬಾಗಿ ಕೊಂಡಿರುದನ್ನು ಸೂಚಿಸುತ್ತದೆ. ಆದ್ದರಿಂದ ಇದಕ್ಕೆ ನಾಗಲಿಂಗ, ನಾಗ ಚಂಪಾ, ಇಂಗ್ಲಿಷ್ ನಲ್ಲಿ ( cannonball tree) ಎಂಬ ಹೆಸರಿನಲ್ಲಿ ಕರೆಯುತ್ತಾರೆ.

ನೋಡಲು ಸುಂದರವಾಗಿದ್ದು, ಸುಗಂಧ ಭರಿತವಾದ ಸುವಾಸನೆಯನ್ನು ಹೊಂದಿರುತ್ತದೆ. ಆದರೆ ಇದರ ಕಾಯಿ ತುಂಬಾ ವಾಸನೆಯಿಂದ ಕೂಡಿರುತ್ತದೆ. ನಾಗಲಿಂಗ ವೃಕ್ಷವು ಔಷಧೀಯ ಗುಣಗಳನ್ನು ಹೊಂದಿದ್ದು ಆಯುರ್ವೇದ ಪದ್ಧತಿಗಳಲ್ಲಿ ಬಳಸುತ್ತಾರೆ ಹಾಗೂ ಕೆಲವು ದೇವಾಲಯಗಳಲ್ಲಿ ಕಾಣಬಹುದು.

ಹಿಂದೂ ಧರ್ಮದಲ್ಲಿ ಈ ವೃಕ್ಷಕ್ಕೆ ವಿಶೇಷವಾದ ಭಕ್ತಿ ಗೌರವ ಹಾಗೂ ನಿಯಮವನ್ನು ಹೊಂದಿರುತ್ತದೆ. ಇದು ಪ್ರಕೃತಿಗೂ, ದೇವರಿಗೂ ಇರುವ ಸಂಬಂಧವನ್ನು ಸೂಚಿಸುತ್ತದೆ. ಆದರೆ ಈ ಮರವು ಈಗ ಅಳಿವಿನಂಚಿನಲ್ಲಿದ್ದು ಇದನ್ನು ಬೆಳೆಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೂ ಈ ಮರದ ಪರಿಚಯವಾಗಬೇಕೆಂದು ವಿನೇಶ್ ಅವರ ಕನಸಾಗಿದೆ. ಇದರ ಅಳಿವಿನಂಚಿಗೆ ಕಾರಣ ಇದರ ಬೀಜ ಪ್ರಸರಣವಾಗದಿರುವುದು. ಇದರ ಕಾಯಿಯ ಒಳಗೆ ಸ್ವಲ್ಪ ಗಟ್ಟಿಯಾದ ಚಿಪ್ಪನ್ನು ಒಳಗೊಂಡಿದೆ. ಆದ್ದರಿಂದ ಇದರ ಬೀಜಗಳು ಅಲ್ಲೇ ಕೊಳೆತು ಬಿಡುವುದರಿಂದ ಬೀಜ ಪ್ರಸರಣ ಆಗದೇ ಅಳಿವಿನಂಚಿಗೆ ತಲುಪಿದೆ.

ಇದನ್ನರಿತ ವಿನೇಶ್ ಅವರು ತಾವೇ ಸ್ವತಃ ಮರದ ಬಳಿ ತೆರಳಿ ಪರೀಕ್ಷಿಸಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದು ಈಗಾಗಲೇ 500ಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದಾರೆ. ಈಗಾಗಲೇ ಹಲವಾರು ವೃಕ್ಷಗಳನ್ನು ದೇವಾಲಯಗಳಿಗೆ ನೀಡಿದ್ದು, ಇನ್ನು ಮುಂದಿನ ದಿನಗಳಲ್ಲಿ 2000 ನಾಗಲಿಂಗ ವೃಕ್ಷವನ್ನು ಬೆಳೆಸುವ ಗುರಿ ವಿನೇಶ್ ಅವರದ್ದು. ಈ ಮರವು ಇನ್ನು ಪ್ರಚಲಿತ ವಾಗಲಿ ಹಾಗೂ ಇನ್ನು ಅಳಿವಿನಂಚಿನಲ್ಲಿರುವ ಮರಗಳನ್ನು ಬೆಳೆಸಿ ಸಂರಕ್ಷಿಸಬೇಕೆಂದು ವಿನೇಶ್ ಅವರ ಮುಖ್ಯ ಗುರಿ. ಏನೇ ಆಗಲಿ ಸ್ವಾರ್ಥದಿಂದ ನಡೆಯುತ್ತಿರುವ ಈ ಸಮಾಜದಲ್ಲಿ ಇಂತಹ ಒಂದು ಪರಿಸರ ಪ್ರೇಮ ಬಹಳ ಅಪರೂಪ ವಾದದ್ದು.

ಉಚಿತವಾಗಿ ನಾಗಲಿಂಗವೃಕ್ಷವನ್ನು ಪಡೆಯಲು ವೀನೇಶ್ ನಿಡ್ಡೋಡಿ ಅವರನ್ನು 8748870759 ಈ ನಂಬರ್ ನ ಮೂಲಕ ಸಂಪರ್ಕಿಸಬಹುದು.