ಅಡಿಕೆ ಕೃಷಿಯ ಕಿರು ಪರಿಚಯ – ಬೆಳೆಸಲಾಗುತ್ತಿರುವ ತಳಿಗಳು ಮತ್ತು ಅವುಗಳ ಗುಣ ಲಕ್ಷಣಗಳ ವಿವರ

ಅಡಿಕೆ ಕೃಷಿಯ ಕಿರು ಪರಿಚಯ – ಬೆಳೆಸಲಾಗುತ್ತಿರುವ ತಳಿಗಳು ಮತ್ತು ಅವುಗಳ ಗುಣ ಲಕ್ಷಣಗಳ ವಿವರ

ಕೃಷಿ ಲೋಕ‌ : ಭಾರತೀಯ ಕೃಷಿ ಪದ್ದತಿಯಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕರಾವಳಿ ಕರ್ನಾಟಕ ಭಾಗದ ಕೃಷಿಕರಂತೂ ಅಡಿಕೆ ಕೃಷಿಯನ್ನೇ ಅವಲಂಬಿಸಿದ್ದಾರೆ. ನಮ್ಮ‌ ದೇಶದ ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ, ಮೇಘಾಲಯ, ಮಹಾರಾಷ್ಟ್ರ ತಮಿಳುನಾಡು ಮತ್ತು ಅಂಡಮಾನ್‌-ನಿಕೋಬಾರ್‌ ದ್ವೀಪ ಸಮುದಾಯಗಳಲ್ಲಿ ಅಡಿಕೆಯನ್ನು ಅತೀ ಹೆಚ್ಚು ಬೆಳೆಯಲಾಗುತ್ತದೆ.

ದೇಶೀಯ ಮತ್ತು ವಿದೇಶೀಯ ತಳಿಗಳ ಆಯ್ಕೆ ಹಾಗೂ ಮೌಲೀಕರಣದಿಂದಾಗಿ ಅಧಿಕ ಇಳುವರಿಯ ಪರಿಣಾಮಕಾರಿ ಫಲಿತಾಂಶವನ್ನು ಗುರುತಿಸಲಾಗಿದ್ದು ಭಾರತೀಯ ವಿವಿಧ ನೈಸರ್ಗಿಕ ವಾತಾವರಣದಲ್ಲಿ ಅವುಗಳ ಕೃಷಿ ಸಾಧ್ಯತೆಯನ್ನು ದೃಢೀಕರಿಸಲಾಗಿದೆ. ಈಗಾಗಲೇ ಮಂಗಳ, ಸುಮಂಗಳ, ಶ್ರೀಮಂಗಳ, ಮೋಹಿತ್‌ ನಗರ, ಕ್ಯಾಲಿಕಟ್‌-17 ಮತ್ತು ಎಸ್‌.ಎ.ಎಸ್‌- 1 ಇವುಗಳನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಲಾಗಿದೆ. ಇವುಗಳಲ್ಲದೆ – ದಕ್ಷಿಣ ಕನ್ನಡ, ಸ್ಥಳೀಯ, ಸಾಗರ, ತೀರ್ಥಹಳ್ಳಿ, ಹೀರೇಹಳ್ಳಿ ಸ್ಥಳೀಯಗಳು ಆಯಾಯ ಪ್ರಾಂತ್ಯದಲ್ಲಿ ಪ್ರಮುಖ ತಳಿಗಳಾಗಿ ಬಳಕೆಯಲ್ಲಿವೆ.

ನಾವು ಮೊದಲಿಗೆ ಅಡಿಕೆ ಬೆಳೆಯ ತಳಿಗಳ ಬಗ್ಗೆ ಗಮನ ಹರಿಸೋಣ.‌ ಮುಂದಿನ ದಿನಗಳಲ್ಲಿ ಅಡಿಕೆ ಕೃಷಿಯ ವಿಧಾನಗಳ ಬಗ್ಗೆ ಚರ್ಚೆ ನಡೆಸೋಣ.

 1. ತೀರ್ಥಹಳ್ಳಿ

ಮಲೆನಾಡು ಹಾಗು ಮೈದಾನ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಸ್ಥಳೀಯ ಎತ್ತರದ ತಳಿ, ಬೀಜ ಉದ್ದನೆಯ ಆಕಾರದ ಸಣ್ಣ ಗಾತ್ರವನ್ನು ಹೊಂದಿರುತ್ತದೆ. ಕೆಂಪು ಅಡಿಕೆಗೆ ಸೂಕ್ತ. ಇಳುವರಿಗೆ 6-7 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮೈದಾನ ಪ್ರದೇಶದಲ್ಲಿ ಹಿಡಿಮುಂಡಿಗೆ ರೋಗಕ್ಕೆ ಒಳಗಾಗಬಹುದು.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :2.6 ಕೆಜಿ / ಪಾಮ್
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಮಲೆನಾಡು ಹಾಗು ಮೈದಾನ ಪ್ರದೇಶ ಈ ತಳಿಗೆ ಸೂಕ್ತವಾಗಿದೆ.

 1. ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಹಾಗು ಕಾಸರಗೋಡು ಜಿಲ್ಲೆಗಳ ರೈತರು ಸಂಪ್ರದಾಯ ಬದ್ಧರಾಗಿ ಬೆಳೆಯುತ್ತಿರುವ ತಳಿ ಇದಾಗಿದೆ. ಎತ್ತರ ಹಾಗೂ ಗಟ್ಟಿಯಾದ ಕಾಂಡವನ್ನು ಹೊಂದಿದ್ದು ನಿರಂತರ ಸಮಾನ ಫಲವನ್ನು ನೀಡುತ್ತದೆ. ಭಾಗಶಃ ಬಾಗಿದ ಎಲೆ ಮುಂಡಾಸು ಮತ್ತು ದೊಡ್ಡನೆ ಅಡಿಕೆಯನ್ನು ಹೊಂದಿದ್ದು ಸರಾಸರಿ 2.5 ಕಿ.ಗ್ರಾಂ ಚಾಲಿ ಉತ್ಪತ್ತಿಯನ್ನು ಪ್ರತೀ ವರುಷ ಪ್ರತೀ ಮರಕ್ಕೆ ನೀಡುತ್ತದೆ. (ಹಣ್ಣಡಿಕ 8-10 ಕಿ.ಗ್ರಾಂ). ಮುಖ್ಯವಾಗಿ “ಚಾಲಿ’ ರೂಪ ಕ್ಕೆಂದೇ ಇದು ಪ್ರಸಿದ್ಧ. ಹಳೇ ಅಡಿಕೆ ತೋಟಗಳಲ್ಲಿ ಎಡೆಸಸಿಗೂ ಇದು ಹೆಚ್ಚು ಪರಿಣಾಮಕಾರಿಯಾಗಿದೆ.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 3.67 ಚಾಲಿ
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕದ ದಕ್ಷಿಣ ಕನ್ನಡ ಹಾಗು ಕಾಸರಗೋಡು
ಬಿಡುಗಡೆ ಗೊಳಿಸಿದ ವರ್ಷ : ಸ್ಥಳೀಯ

 1. ಶ್ರೀವರ್ಧನ

ಇದು ಮಹಾರಾಷ್ಟ್ರದ ಉತ್ತಮ ಗುಣಮಟ್ಟದ ಸ್ಥಳೀಯ ತಳಿ. ದುಂಡಗೆ ಹಾಗೂ ಮಧ್ಯಮ ಗಾತ್ರದ ಬೀಜವನ್ನು ಹೊಂದಿದ್ದು, ಪ್ರತಿ ಮರದಿಂದ 2 ಕೆ.ಜಿ ಇಳುವಳಿಯನ್ನು ನಿರೀಕ್ಷಿಸಬಹುದು.

ಇನ್ನು ಸುಧಾರಿತ ತಳಿಗಳ ಬಗ್ಗೆ ತಿಳಿಯೋಣ.

 1. ಮಂಗಳ

ಚೀನಾ ಮೂಲದ ಈ ತಳಿ ಉತ್ತಮ ಗುಣಧರ್ಮಗಳಿಂದಾಗಿ ಕೃಷಿಕರ ಗಮನ ಸಳೆದಿದೆ. ಬೇಗನೆ ಹೂ ಬಿಡುವಿಕೆ, ಅಧಿಕ ಹೆಣ್ಣು ಹಿಂಗಾರ ತುಂಬಾ ಹೊಂದಿರುವಿಕೆ, ಅಧಿಕ ಕಾಯಿ ಗಟ್ಟುವಿಕೆ, ಆರಂಭದಿಂದಲೇ ಸಮಗ್ರ ಫಲದಾಯಿತ್ವ ಮತ್ತು ಮರುಪಟುತ್ವ, ಹೋಲಿಕೆಯಲ್ಲಿ ದಕ್ಷಿಣ ಕನ್ನಡದ ಊರು ಮರಗಳಿಗಿಂತ ಚಿಕ್ಕವಾಗಿದ್ದು ಗಮನಾರ್ಹವಾಗಿದೆ. ವಾರ್ಷಿಕ ಇಳುವರಿ ಮರವೊಂದಕ್ಕೆ ಸರಾಸರಿ 11.808. ಗ್ರಾಂ. ಹಣ್ಣಡಿಕೆ (3.00 ಕಿ.ಗ್ರಾಂ. ಚಾಲಿ) ದಾಖಲಾಗಿದೆ. 1972ರಲ್ಲಿ “ಮಂಗಳ’ವೆಂಬ ಹೆಸರಿನಿಂದ, ವಿಟ್ಲ ಸಂಶೋಧನಾ ಕ್ಷೇತ್ರದಿಂದ ರೈತರಿಗಾಗಿ ಬಿಡುಗಡೆ ಮಾಡಲ್ಪಟ್ಟಿದೆ. ಈ ತಳಿ ಕರಾವಳಿ ಕರ್ನಾಟಕ ಹಾಗೂ ಕೇರಳಕ್ಕೆಂದು ಶಿಫಾರಸು ಮಾಡಲಾಗಿದೆ. ಸಮುದ್ರ ಮಟ್ಟಕ್ಕಿಂತ 800 ಮೀ ಎತ್ತರದ ವರೆಗಿನ ಭೂ ಪ್ರದೇಶಗಳಲೆಲ್ಲಾ ಮಂಗಳ ಅಡಿಕೆ ಕೃಷಿ ಕೈಗೊಳ್ಳಬಹುದಾಗಿದೆ.

ಗಾಢ ಹಸಿರು ವರ್ಣದ ತುಂಬಿದ ವಿಸ್ತೃತ ಹರವುಳ್ಳ ಸೋಗೆ ಕಿರೀಟವನ್ನು ಮಂಗಳದಲ್ಲಿ ಕಾಣಬಹುದು. ಸೋಗೆಗಳ ತುತ್ತ ತುದಿಯ ಭಾಗದಲ್ಲಿ ಗುಂಗುರು ಮಡಿಕೆಯ ಎಲೆ ಚಿತ್ತಾರವು ಅಲಂಕೃತಗೊಂಡಿರುವುದನ್ನು ಗುರುತಿಸಬಹುದು. ಮಧ್ಯಮ ಎತ್ತರ, ಶೀಘ್ರ ಮತ್ತು ಅಧಿಕ ಇಳುವರಿ (3-4 ವರ್ಷದಲ್ಲಿ ಹೂವು ಬಿಡಲಾರಂಭಿಸುತ್ತದೆ), ಹೆಚ್ಚು ಕಾಯಿ ಕಟ್ಟುವಿಕೆ. ಗಾಢ ಹಸಿರು ವರ್ಣ ತುಂಬಿದ ವಿಸ್ತೃತ ಹರವುಳ್ಳೆ ಸೋಗೆ. ಸೋಗೆಯ ತುತ್ತ ತುದಿಯ ಭಾಗವು ಗುಂಗುರು ಮಡಿಕೆಯಾಗಿರುವುದು, ಹಣ್ಣಡಿಕೆಯು ಕಡು ಹಳದಿ-ಕಿತ್ತಳೆ ವರ್ಣದ್ದಾಗಿದ್ದು,ಮಧ್ಯಮ ಗಾತ್ರ ಮತ್ತು ದುಂಡಾಕಾರದಿಂದ ಉದ್ದನೆಯ ಆಕೃತಿಯನ್ನು ಹೊಂದಿರುತ್ತದೆ.

ಗಿಡ ನೆಟ್ಟು ಎರಡು ವರ್ಷಗಳೊಳಗೆ ಕಂಡುಬರುವ (ಸಾಮಾನ್ಯವಾಗಿ ಶೇಕಡಾ 2ರಷ್ಟು ಇರುವ) ಸಣಕಲು ಗಿಡಗಳನ್ನು ಕಿತ್ತು ಬೇರೆ ಆರೋಗ್ಯ ಪೂರ್ಣ ಗಿಡವನ್ನು ಪರ್ಯಾಯಗೊಳಿಸಬೇಕು.
ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 3.00 ಚಾಲಿ
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕ ಹಾಗು ಕೇರಳ
ಬಿಡುಗಡೆ ಗೊಳಿಸಿದ ವರ್ಷ : 1972

 1. ಸುಮಂಗಲ

ಇದರ ಮೂಲ ಇಂಡೋನೇಷಿಯಾ. ದೇಶ ವಿದೇಶಗಳ ತಳಿಯೊಂದಿಗೆ ಮೌಲೀಕರಣ ನಡೆಸಲಾಗಿ ಅಭಿವೃದ್ಧಿಗೊಳಿಸಿದ ಈ ತಳಿ ಸ್ಥಳೀಯ “ದಕ್ಷಿಣ ಕನ್ನಡ’ದ ಅಡಿಕೆಯೊಂದಿಗೆ ಶೇಕಡಾ 64ರಷ್ಟು ಅಧಿಕ ಇಳುವರಿಯನ್ನು ಪ್ರಕಟಪಡಿಸಿದೆ. ಇದರ ಉತ್ತಮ ಗುಣ ಧರ್ಮಗಳನ್ನು ಅನುಸರಿಸಿ ಅಡಿಕೆ ಬೆಳೆಯುವ ಎಲ್ಲಾ ಪ್ರದೇಶಗಳಿಗೆ, ವಿಶೇಷವಾಗಿ ಕರಾವಳಿ ಕರ್ನಾಟಕ ಹಾಗೂ ಕೇರಳಕ್ಕೆಂದು ಶಿಫಾರಸ್ಸು ಮಾಡಿ 1985ರಲ್ಲಿ ಬಿಡುಗಡೆ ಮಾಡಲಾಗಿದೆ.

ಸುಮಂಗಳವು ಎತ್ತರ ಜಾತಿಯ, ಭಾಗಶಃ ಬಾಗಿದ ಎಲೆಗಳ ತಲೆಕಿರೀಟ ಹೊಂದಿದ್ದು, 4-5 ವರ್ಷಕ್ಕೆ ಹೂ ಬಿಡಲಾರಂಭಿಸುತ್ತದೆ. ಅಧಿಕ ಇಳುವರಿಯನ್ನು ತೋರ್ಪಡಿಸಿದೆ. ಹಣ್ಣಡಿಕೆ ಉದ್ದನೆಯ ಆಕೃತಿಯಿಂದ ಉರುಟು ಆಕೃತಿಯವರೆಗೆ ಇದ್ದು ಹಳದಿ-ಕಿತ್ತಳೆ ವರ್ಣಗಳನ್ನು ತೋರಬಲ್ಲುದು.

ವಾರ್ಷಿಕ ಇಳುವರಿ ಮರವೊಂದಕ್ಕೆ ಸರಾಸರಿ 17.25 ಕಿ.ಗ್ರಾಂ ಹಣ್ಣಡಿಕೆ (3.28 ಕಿ.ಗ್ರಾಂ ಚಾಲಿ)ಯನ್ನು ನೀಡಬಲ್ಲುದು. (10 ವರ್ಷಗಳ ಸರಾಸರಿ)
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕ ಹಾಗು ಕೇರಳ
ಬಿಡುಗಡೆ ಗೊಳಿಸಿದ ವರ್ಷ : 1985

 1. ಶ್ರೀ ಮಂಗಳ

ಶ್ರೀಮಂಗಳದ ಮೂಲ ಸಿಂಗಾಪುರವಾಗಿದ್ದು, ಅದನ್ನು ಅಭಿವೃದ್ಧಿಪಡಿಸಲಾಗಿದ್ದು, ದಕ್ಷಿಣ ಕನ್ನಡ ಸ್ಥಳೀಯ ಅಡಿಕೆಗಿಂತ 59% ಅಧಿಕ ಇಳುವರಿಯನ್ನು ದಾಖಲಿಸಿದೆ.
ಶ್ರೀ ಮಂಗಳವು ಎತ್ತರ ಜಾತಿಯ, ಭಾಗಶಃ ಬಾಗಿದ ಎಲೆಗಳ ಮುಂಡಾಸನ್ನು ಹೊಂದಿದ್ದು ಮರದ ಗಂಟುಗಳ ಅಂತರವು ದೂರದೂರವಾಗಿದೆ.. ಹಣ್ಣಡಿಕೆ ಉದ್ದನೆಯಿಂದ ಉರುಟಾಕೃತಿವರೆಗೆ ಇದ್ದು ಕಡು ಹಳದಿ ವರ್ಣದ್ದಾಗಿರುತ್ತದೆ.
1985ರಲ್ಲಿ ಕರಾವಳಿ ಕರ್ನಾಟಕ ಹಾಗೂ ಕೇರಳಕ್ಕೆಂದು ಶಿಫಾರಸ್ಸು ಮಾಡಿ ಬಿಡುಗಿಡೆ ಮಾಡಲಾಗಿದೆ. 4-5 ವರ್ಷಕ್ಕೆ ಹೂ ಬಿಡಲಾರಂಭಿಸುತ್ತದೆ. ಮರವೊಂದಕ್ಕೆ ವಾರ್ಷಿಕ ಇಳುವರಿ ಸರಾಸರಿ 15.63 ಕಿ.ಗ್ರಾಂ. ಹಣ್ಣಡಿಕೆ (3.18 ಕಿ.ಗ್ರಾಂ. ಚಾಲಿ)ಯನ್ನು ನೀಡುತ್ತದೆ.
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕ ಹಾಗು ಕೇರಳ
ಬಿಡುಗಡೆಗೊಳಿಸಿದ ವರ್ಷ : 1985

 1. ಮೋಹಿತ್ ನಗರ

ಇದು ಸ್ವದೇಶೀ ತಳಿ, ಪಶ್ಚಿಮ ಬಂಗಾಳದ ಮೋಹಿತ್‌ ನಗರದಿಂದ ತಂದು ಅಭಿವೃದ್ಧಿ ಪಡಿಸಲಾಗಿದೆ. ಇದು ಮಂಗಳದ ಮೇಲೆ 23% ಅಧಿಕ ಹಾಗೂ ದಕ್ಷಿಣ ಕನ್ನಡ ಸ್ಥಳೀಯದ ಮೇಲೆ 84% ಅಧಿಕ ಇಳುವರಿಯನ್ನು ದಾಖಲಿಸಿದೆ. 1991ರಲ್ಲಿ ವೈಜ್ಞಾನಿಕ ಶಿಫಾರಸ್ಸು ಪಡೆದು. ಕರ್ನಾಟಕ್ಕೆ ಕೇರಳ ಹಾಗೂ ಪಶ್ಚಿಮ ಬಂಗಾಳದ ರೈತರಿಗಾಗಿ ಬಿಡುಗಡೆ ಮಾಡಲಾಗಿದೆ.
ಒಂದೇ ಸಮಾನತ್ವ ಗುಣವನ್ನು ಎಲ್ಲಾ ಮರಗಳು ಕಾಯ್ದುಕೊಳ್ಳುವುದು ಇದರ ವೈಶಿಷ್ಟ್ಯ. ತುಂಬಿದ ಅಡಿಕೆಗೊನೆಗಳು ಸಮರ್ಥನೀಯವಾಗಿ ಕಾಣಿಸಿಕೊಂಡು ಸಡಿಲರೂಪದ ಎಸಳುಗಳಲ್ಲಿ ಕಾಯಿಗಟ್ಟಿ ದಷ್ಟ ಪುಷ್ಟ ಬೆಳವಣಿಗೆಯನ್ನು ಸಾಧಿಸುತ್ತದೆ.
ವರುಷವೂ ವ್ಯತ್ಯಾಸವಿಲ್ಲದ ಸಮಾನ ಫಲವಂತಿಕೆಗೆ ಇದು ಸೂಕ್ತವಾಗಿದೆ. ಶೀಘ್ರ ಫಲಕಾರಿ. ಮರವೊಂದಕ್ಕೆ ವಾರ್ಷಿಕ ಸರಾಸರಿ ಇಳುವರಿ 15.08 ಕಿ.ಗ್ರಾಂ ಹಣ್ಣಡಿಕೆ (3.67 ಕಿ.ಗ್ರಾಂ ಚಾಲಿ)ಯನ್ನು ಸಾಧಿಸಿದೆ.
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕ ,ಕೇರಳ ಹಾಗೂ ಪಶ್ಚಿಮ ಬಂಗಾಳ
ಬಿಡುಗಡೆ ಗೊಳಿಸಿದ ವರ್ಷ : 1991

 1. ಹಿರೇಹಳ್ಳಿ ಸ್ಥಳೀಯ

ಇದು ಕರ್ನಾಟಕ ಮೈದಾನ ಪ್ರದೇಶದ ಪ್ರಮುಖ ತಳಿಯಾಗಿದೆ. ಇದನ್ನು ತುಮಕೂರು, ಮಂಡ್ಯ ಮತ್ತು ಬೆಂಗಳೂರು-ಹಾಸನ ಜಿಲ್ಲೆಗಳ ಕೆಲಭಾಗಗಳಲ್ಲಿ ಬೆಳೆಯಲಾಗುತ್ತಿದೆ. ಎತ್ತರ ಜಾತಿಯ ಮರ, ಮಧ್ಯಮ ಗಾತ್ರದ ಕಾಂಡ, ಸೆಟೆದ ಗೊನೆಗಳು ಹಾಗೂ ಉರುಟು ಉದ್ದನ ಆಕೃತಿಯ ಅಡಿಕೆ ರೂಪದಲ್ಲಿರುತ್ತವೆ.
ಸರಾಸರಿ ವಾರ್ಷಿಕ ಇಳುವರಿ ಮರವೊಂದಕ್ಕೆ 3.2ಕಿ.ಗ್ರಾಂ ಚಾಲಿ ಹಾಗೂ ಎಳೆ ಅಡಿಕೆ ಸಂಸ್ಕರಣದಲ್ಲಿ ಬಳಕೆಯಾಗುತ್ತವೆ.
ಶಿಫಾರಸ್ಸು ಮಾಡಲಾದ ಭೂಪ್ರದೇಶ : ತುಮಕೂರು, ಮಂಡ್ಯ ಮತ್ತು ಬೆಂಗಳೂರು,ಹಾಸನ ಜಿಲ್ಲೆ
ಬಿಡುಗಡೆಗೊಳಿಸಿದ ವರ್ಷ : ಸ್ಥಳೀಯ

 1. ಸಮೃದ್ಧಿ

ಎತ್ತರವಾಗಿ ಬೆಳೆಯುವ ಮರ ಇದಾಗಿದ್ದು, ಪ್ರತಿ ವರುಷವೂ ವ್ಯತಾಸವಿಲ್ಲದ ಸಮಾನ ಮತ್ತು ಅಧಿಕ ಫಲವಂತಿಕೆ, ಒಂದಕ್ಕೊಂದು ಕಾಯ್ದುಕೊಂಡ ಗೊನೆಗಳು, ಉರುಟು ಆಕಾರದ ಉತ್ತಮ ಗಾತ್ರದ ಹಣ್ಣಡಿಕೆಯನ್ನು ನೀಡುತ್ತದೆ.
ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :4.37
ಶಿಫಾರಸ್ಸು ಮಾಡಲಾದ ಭೂಪ್ರದೇಶ: ಅಂಡಮಾನ್ ಮತ್ತು ನಿಕೋಬಾರ್
ಬಿಡುಗಡೆ ಗೊಳಿಸಿದ ವರ್ಷ :1995

 1. ಸ್ವರ್ಣ ಮಂಗಳ

ಎತ್ತರ ಜಾತಿಯ ಅಧಿಕ ಇಳುವರಿ ಕೊಡುವ ತಳಿ, ಮರದ ಗಂಟುಗಳ ಅಂತರವು ತುಲನಾತ್ಮಕವಾಗಿ ಕಡಿಮೆಯಿದ್ದು, ಭಾಗಶಃ ಬಾಗಿದ ಚಂಡೆಯನ್ನು ಹೊಂದಿದೆ. ಹಣ್ಣಡಿಕೆಯು ದೊಡ್ಡದಾಗಿ, ಭಾರವಾಗಿದ್ದು. ಹೆಚ್ಚಿನ ಜಾಲಿ ಇಳುವರಿಯನ್ನು ನೀಡುತ್ತದೆ.
ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :3.88
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕ ಹಾಗು ಕೇರಳ
ಬಿಡುಗಡೆ ಗೊಳಿಸಿದ ವರ್ಷ : 2006

 1. ಕಾಹಿಕುಚಿ

ಎತ್ತರವಾಗಿ ಬೆಳೆಯುವ ಮಧ್ಯಮ ದಪ್ಪದ ಕಾಂಡವಿರುವ ಭಾಗಶಃ ಬಾಗಿದ ಎಲೆಯನ್ನು ಹೊಂದಿದ ಚಂಡೆಯಿರುವ ತಳಿ. ಸ್ಥಿರವಾಗಿ ಇಳುವರಿ ನೀಡುತ್ತದೆ. ಕಿತ್ತಳೆ ಬಣ್ಣದ ದೊಡ್ಡ ಗಾತ್ರದ ಮತ್ತು ದುಂಡಾದ ಹಣ್ಣಡಿಕೆಯನ್ನು ಹೊಂದಿದ್ದು 40-45 ವರ್ಷಗಳವರೆಗೂ ಉತ್ತಮ
ಇಳುವರಿ ನೀಡಬಲ್ಲದು.
ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :3.70
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಅಸ್ಸಾಂ ಮತ್ತು ಈಶಾನ್ಯ ಭಾರತ
ಬಿಡುಗಡೆ ಗೊಳಿಸಿದ ವರ್ಷ :2009

 1. ಮಧುರಮಂಗಳ

ಮಧ್ಯಮ ಎತ್ತರ ಬೆಳೆಯುವ ಮಧ್ಯಮ ದಪ್ಪದ ಕಾಂಡವನ್ನು. ಹೊಂದಿರುವ ತಳಿ. ಮರದ ಗಂಟುಗಳ ಅಂತರ ಕಡಿಮೆ, ಭಾಗಶಃ ಬಾಗಿದ ಎಲೆಗಳನ್ನೊಳಗೊಂಡ ಜಂಡೆ, ಸ್ಥಿರ ಇಳುವರಿ, ಕಿತ್ತಳೆ ಬಣ್ಣದ ದೊಡ್ಡ ಗಾತ್ರವಿರುವ ಗೋಲಾಕಾರದ ಹಣ್ಣಡಿಕೆ. 4ನೇ ವರ್ಷದಿಂದ ಇಳುವರಿ ಪ್ರಾರಂಭ. ಎಳೆಕಾಯಿ ಸಂಸ್ಕರಣೆ ಮತ್ತು ಚಾಲಿ ಎರಡಕ್ಕೂ ಯೋಗ್ಯವಾಗಿದೆ.
ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 3.54
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕ ಮತ್ತು ಕೊಂಕಣ್ ಪ್ರದೇಶ
ಬಿಡುಗಡೆ ಗೊಳಿಸಿದ ವರ್ಷ : 2013

 1. ನಲ್ ಬರಿ

ಎತ್ತರವಾಗಿ ಬೆಳೆಯುವ ಮಧ್ಯಮ ಗಾತ್ರದ ಕಾಂಡವನ್ನು ಹೊಂದಿರುವ ತಳಿ. ಮರದ ಗಂಟುಗಳ ಅಂತರ ದೂರವಾಗಿರುವುದು. ಭಾಗಶಃ ಬಾಗಿದ ಎಲೆಗಳಿರುವ ಚಂಡೆ, ಸ್ಥಿರ ಇಳುವರಿ, ಹಳದಿ ಬಣ್ಣದ ಉರುಟಾಗಿರುವ ಹಣ್ಣಡಿಕೆ. ತಾಜಾ ಹಣ್ಣಡಿಕೆಯಿಂದ ಹೆಚ್ಚಿನ ಪ್ರಮಾಣದ ಒಣ ಅಡಿಕೆ (ಚಾಲಿ) ದೊರೆಯುತ್ತದೆ.
ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :4.15
ಶಿಫಾರಸ್ಸು ಮಾಡಲಾದ ಭೂಪ್ರದೇಶ: ಕರ್ನಾಟಕ ,ಉತ್ತರ ಬಂಗಾಲ ಮತ್ತು ಈಶಾನ್ಯ ಭಾರತ
ಬಿಡುಗಡೆ ಗೊಳಿಸಿದ ವರ್ಷ :2013

 1. ಶತ ಮಂಗಳ

ತಳಿಯ ಮರಗಳು ಕ್ರಮಬದ್ಧವಾಗಿ ಇಳುವರಿಯನ್ನು ಕೊಡುವುದರ ಜೊತೆಗೆ ಎಳೆಕಾಯಿ (ಕೆಂಪಡಿಕೆ) ಸಂಸ್ಕರಣೆಗೆ ಸೂಕ್ತವಾದ ಉತ್ತಮ ಗುಣಮಟ್ಟದ ಅಡಿಕೆಯನ್ನು ಹೊಂದಿವೆ. ಮರಗಳು ಮಧ್ಯಮ ವಪ್ಪ ಕಾಂಡ, ಕಿರಿದಾದ ಮರದ ಗಂಟುಗಳ ಅಂತರ, ಭಾಗಶಃ
ಜೋತಾಡುವ ಚಂಡೆ ಮತ್ತು ಮಧ್ಯಮ ಎತ್ತರವನ್ನು ಹೊಂದಿರುತ್ತವೆ. ಹಣ್ಣುಗಳು ದುಂಡನೆ ಆಕಾರವನ್ನು ಹೊಂದಿದ್ದು, ಅತಿ ಹೆಚ್ಚು ಅಂದರೆ ಶೇಕಡ 26.8 ರಷ್ಟು ಚಾಲಿ ದೊರೆಯುತ್ತದೆ.
ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 3.98
ಶಿಫಾರಸ್ಸು ಮಾಡಲಾದ ಭೂಪ್ರದೇಶ:
ಬಿಡುಗಡೆ ಗೊಳಿಸಿದ ವರ್ಷ :2016

ಕುಬ್ಜ ಸಂಕರಣ ತಳಿಗಳು

1.ವಿಟಿಎಲ್ಎಹೆಚ್ -1

ಗಿಡ್ಡವಾಗಿರುವ ಮತ್ತು ಗಟ್ಟಿಮುಟ್ಟಾದ ಕಾಂಡವನ್ನು ಹೊಂದಿರುವ ಸಂಕರಣ ತಳಿ, ಚಿಕ್ಕದಾದ ಮೇಲ್ಮೈ ಮತ್ತು ಭಾಗಶಃ ಬಾಗಿರುವ ಎಲೆಗಳನ್ನು ಹೊಂದಿರುವ ಚಂಡೆ ಮತ್ತು ಉತ್ತಮವಾಗಿ ಹೊರ ಜಾಚಿರುವ ಎಲೆಗಳು.
ಮಧ್ಯಮ ಗಾತ್ರದ ಅಂಡಾಕಾರದಿಂದ ಉರುಟಾದ ಹಳದಿ ಬಣ್ಣದ ಹಣ್ಣಡಿಕೆ, ಸ್ಥಿರ ಇಳುವರಿ ಮತ್ತು ಉತ್ತಮ ಚಾಲಿ ಪ್ರಮಾಣ (26.45%) ಇದರ ವೈಶಿಷ್ಟ್ಯ.
ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 2.54
ಶಿಫಾರಸ್ಸು ಮಾಡಲಾದ ಭೂಪ್ರದೇಶ:ಕರ್ನಾಟಕ ಹಾಗು ಕೇರಳ
ಬಿಡುಗಡೆ ಗೊಳಿಸಿದ ವರ್ಷ :2006

2.ವಿಟಿಎಲ್ಎಹೆಚ್ -2
ಮುಖ್ಯ ಗುಣ ಲಕ್ಷಣಗಳು:
ಗಿಡ್ಡವಾಗಿ ಮಧ್ಯದ ದಪ್ಪನೆಯ ಕಾಂಡವನ್ನು ಹೊಂದಿರುವ ಕುಬ್ಜ ಸಂಕರಣ ತಳಿ. ಚಿಕ್ಕದಾಗಿರುವ ಮೇಲ್ಮೈ ಮತ್ತು ಭಾಗಶಃ ಬಾಗಿರುವ ಎಲೆಗಳನ್ನು ಹೊಂದಿರುವ ಚಂಡೆ, ಅಂಡಾಕಾರದಿಂದ ದುಂಡಾಗಿರುವ ಹಣ್ಣಡಿಕೆ, ಸ್ಥಿರ ಇಳುವರಿ ಮತ್ತು ಹೆಚ್ಚಿನ ಜಾಲಿ ಉತ್ಪತ್ತಿ ಇದರ ಮುಖ್ಯ ಗುಣಲಕ್ಷಣ.
ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 2.64
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕ ಹಾಗು ಕೇರಳ
ಬಿಡುಗಡೆಗೊಳಿಸಿದ ವರ್ಷ : 2006

ಮೇಲೆ ಹೇಳಿದ ಎಲ್ಲಾ ತಳಿಗಳು ಶಿಫಾರಸ್ಸಿಗಿಂತ ಭಿನ್ನವಾದ ಸ್ಥಳಗಳಲ್ಲಿ ವ್ಯತಿರಿಕ್ತ ಫಲಿತಾಂಶಕ್ಕೆ ಕಾರಣವಾಗಬಹುದು. ನೈಸರ್ಗಿಕ ಬದಲಾವಣೆಗಳು ತಳಿಯ ವೈಶಿಷ್ಟ್ಯಗಳನ್ನು ಕಾಯ್ದುಕೊಳ್ಳಲು ಅಸಮರ್ಥವಾಗುತ್ತವೆ. ಆದುದರಿಂದ ರೈತರು ಭೌಗೋಳಿಕ ಹಾಗೂ ಶಿಫಾರಸ್ಸಿನ ಹಿಂದಿನ ಸೂಕ್ಷ್ಮ ಗಳನ್ನು ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಎಲ್ಲದಕ್ಕೂ ಮಿಗಿಲಾಗಿ ಪ್ರಗತಿಪರ ಕೃಷಿಕರ ಇಲ್ಲವೇ ಸಮೀಪದ ತೋಟದ ಬೆಳೆಗಳ ಸಂಶೋಧನಾ ಕೇಂದ್ರಗಳನ್ನು ಭೇಟಿಯಾಗಿ ಮಾಹಿತಿ ಪಡೆಯಬಹುದಾಗಿದೆ.

ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ ವಿಟ್ಲ – 574243, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ
ದೂರವಾಣಿ ‌: 08255-52222

ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಕಾಸರಗೋಡು -671124 ಕೇರಳ ರಾಜ್ಯ.

ದೂರವಾಣಿ : 04994-232893 / 94 / 95, 232090
ಫ್ಯಾಕ್ಸ್ : 04994-232322

ಕೃಷಿಗೆ ಸಂಬಂಧಿಸಿದ ಲೇಖನಗಳಿಗೆ ಸದಾ ಸ್ವಾಗತ.
ಕೃಷಿಲೋಕಕ್ಕೆ ನೀವೂ ಕೂಡ ಲೇಖನಗಳನ್ನು ಬರೆಯಬಹುದು. ಕೃಷಿಯಾಧಾರಿತ ಯಾವುದೇ ಲೇಖನಗಳು, ಸುದ್ದಿಗಳಿದ್ದರೂ ನಮಗೆ ಕಳುಹಿಸಿಕೊಡಬಹುದು. ನಿಮ್ಮ ಉತ್ತಮ ಬರಹಕ್ಕೆ ನಾವು ವೇದಿಕೆ ಒದಗಿಸಲಿದ್ದೇವೆ.
ಸಂಪರ್ಕಕ್ಕಾಗಿ :
+91 8431215975, +91 7760479111

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *