- ಮಾದರಿ ಕೃಷಿಕರುಹೈನುಗಾರಿಕೆ
- December 6, 2022
- No Comment
- 24481
ಬಂಗಾರವನ್ನೂ ಮೀರಿಸುವ ತುಪ್ಪದ ಬೆಲೆ – ಹೈನುಗಾರಿಕೆಯಲ್ಲಿ ಕೈತುಂಬಾ ಆದಾಯ ಗಳಿಸುತ್ತಿರುವ ವಿಜಯಪುರದ ಮಹಿಳೆ

ಕೃಷಿ ಲೋಕ : ಸಾಮಾನ್ಯವಾಗಿ ತುಪ್ಪಕ್ಕೆ ಕೆಜಿಗೆ ಐನೂರಿಂದ ಸಾವಿರ ರೂಪಾಯಿ ಇರುವುದನ್ನು ನೋಡಿದ್ದೇವೆ. ಆದರೆ, ವಿಜಯಪುರದ ಮಹಿಳೆಯೊಬ್ಬರು ತಯಾರಿಸುವ ತುಪ್ಪದ ಬೆಲೆ ಕೆಜಿಗೆ ಬರೋಬ್ಬರಿ ₹ 2500. ಆದರೂ ಈ ತುಪ್ಪಕ್ಕೆ ಭಾರೀ ಬೇಡಿಕೆ ಇದೆ.
ಹೌದು, ಇದು ಅಂತಿಂತ ತುಪ್ಪವಲ್ಲ. ಅಪ್ಪಟ ಬಂಗಾರದಂತ ತುಪ್ಪ!. ಬಂಗಾರವನ್ನೂ ಮೀರಿಸುವ ಬೆಲೆ ಈ ತುಪ್ಪದ್ದು. ಸಾಮಾನ್ಯ ಜನರ ಪಾಲಿಗಿದು ಬಿಸಿ ತುಪ್ಪವಾದ್ರೂ ಅದರಿಂದ ಭಾರೀ ಪ್ರಯೋಜನವಿದೆ.
ಈ ದುಬಾರಿ ತುಪ್ಪದ ತಯಾರಕಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಅಶ್ವಿನಿ ಚಂದ್ರಶೇಖರ ರೆಡ್ಡಿ. ಅವರು ಓದಿದ್ದು ಬಿ.ಎ., ಬಿ.ಇಡಿ. ಅಶ್ವಿನಿ ಅವರ ಪತಿ ಚಂದ್ರಶೇಖರ್ ರೆಡ್ಡಿ ಹೆಸ್ಕಾಂ ಅಧಿಕಾರಿ. ಮದುವೆಯಾದ ಬಳಿಕ ಅಶ್ವಿನಿ ಕೃಷಿಯತ್ತ ಆಕರ್ಷಿತರಾಗಿದ್ದಾರೆ.
ವಿಜಯಪುರದ ಕೃಷಿ ವಿಶ್ವವಿದ್ಯಾಲಯದಲ್ಲಿ ಹೈನುಗಾರಿಕೆ ತರಬೇತಿಯನ್ನು ಪಡೆದುಕೊಂಡ ಅಶ್ವಿನಿ ಅವರು ಪತಿಯ ಸಹಾಯದಿಂದ ಸ್ವದೇಶಿ ತಳಿಯ ಗೀರ್ ಆಕಳನ್ನ ಗುಜರಾತ್‌ನಿಂದ ಖರೀದಿಸಿ ತಂದರು. ಹೀಗೆ ಆರಂಭವಾದ ಅವರ ಹೈನುಗಾರಿಕೆಯಲ್ಲಿ ಇಂದು ಗಿರ್ ಆಕಳಿನ ಸಂಖ್ಯೆ 40 ದಾಟಿದೆ.
ಸ್ವದೇಶಿ ತಳಿಯಾದ ಗಿರ್ ಆಕಳುಗಳ ಹಾಲಿನಿಂದ ಮೊಸರು, ಮಜ್ಜಿಗೆ, ತುಪ್ಪ ತಯಾರಿಸ್ತಾರೆ. ಜೊತೆಗೆ ಗೋಮೂತ್ರವನ್ನೂ ಮಾರಾಟ ಮಾಡ್ತಾರೆ. ದಿನವೊಂದಕ್ಕೆ 40 ರಿಂದ 50 ಲೀಟರ್ ಹಾಲು ಉತ್ಪಾದಿಸುವ ಇವರು, ಅದರಲ್ಲಿ ಶೇ 75 ರಷ್ಟು ತುಪ್ಪ ತೆಗೆದು ಮಾರುತ್ತಾರೆ.
ಗಿರ್ ತಳಿಯ ಆಕಳಿನ ಹಾಲು, ತುಪ್ಪಕ್ಕೆ ಭಾರೀ ಬೇಡಿಕೆ ಇದೆ. ಮಾತ್ರವಲ್ಲ ದುಬಾರಿಯೂ ಹೌದು. ಹಾಗಾಗಿ, ಎರಡೂವರೆ ಸಾವಿರ ತೆತ್ತಾದರೂ ಹಲವು ಕಾಯಿಲೆಗಳಿಗೆ ರಾಮಬಾಣವಾದ ಈ ತುಪ್ಪ ಖರೀದಿಗೆ ಜನ ಬರುತ್ತಾರೆ. ಹೀಗೆ ಹೈನುಗಾರಿಕೆ ಮೂಲಕ ಅಶ್ವಿನಿ ರೆಡ್ಡಿ ಅವರು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇವರು ಸಾಂಪ್ರದಾಯಕ ವಿಧಾನವಾದ ಕಡಗೋಲಿನಿಂದ ಬೆಣ್ಣೆ ತೆಗೆಯುತ್ತಾರೆ. ಹೀಗಾಗಿ ಹೆಚ್ಚು ಸ್ವಾದವಾದ ತುಪ್ಪ ದೊರೆಯುತ್ತದೆ ಎಂಬುದು ಗ್ರಾಹಕರ ಅಭಿಪ್ರಾಯ.
ಹೈನುಗಾರಿಕೆ ಮಾತ್ರವಲ್ಲ ಬಾತುಕೋಳಿ, ಟರ್ಕಿ, ಜವಾರಿ, ಗಿಣಿಯಾ ಪೌಲ್, ಗಿರಿರಾಜ ಕೋಳಿಗಳು, ಮುಧೋಳ ಶ್ವಾನ ಸೇರಿದಂತೆ ಪಾರಿವಾಳಗಳಿಗೂ ಆಶ್ರಯದಾತರಾಗಿದ್ದಾರೆ.