- ಕೃಷಿ ವಿಜ್ಞಾನ
- January 1, 2022
- No Comment
- 1584
ಕಡಿಮೆ ಸೌದೆ ಖರ್ಚಿನ ಹೊಸ ಮಾದರಿಯ ಅಸ್ತ್ರ ಒಲೆ; ಏನಿದರ ವಿಶೇಷತೆ – ಇಲ್ಲಿದೆ ಸಂಪೂರ್ಣ ಮಾಹಿತಿ

ಕೃಷಿ ಲೋಕ: ಅಡುಗೆ ಮಾಡಲು ಬೆಂಕಿ ಬಹುಮುಖ್ಯ. ಇದಕ್ಕಾಗಿ ಜನ ಅಡುಗೆ ಗ್ಯಾಸ್ ಅಥವಾ ಸೌದೆ ಬಳಸಿಕೊಳ್ಳುತ್ತಾರೆ. ಪ್ರಸ್ತುತ ದಿನಕ್ಕೆ ಸೌದೆ ಸಿಗುವುದು ಸ್ವಲ್ಪ ಕಷ್ಟವೇ ಸರಿ. ಗ್ಯಾಸ್ ಅಂತೂ ದುಬಾರಿ ವೆಚ್ಚವೆಂಬ ಟೀಕೆಗೆ ಗುರಿಯಾಗಿದೆ. ಇವೆರಡರ ಮಧ್ಯೆ ಇದೀಗ ಜನತೆಗೆ ಹೊಸ ಮಾದರಿಯ ಅಸ್ತ್ರ ಒಲೆಯ ಪರಿಚಯವನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.
ಕಡಿಮೆ ಸೌದೆ ಬಳಕೆ ಹಾಗೂ ಕಡಿಮೆ ಹೊಗೆ ಹೊರ ಬರುವುದು ಇದರ ವಿಶೇಷತೆಯಾಗಿದೆ. ಅಸ್ತ್ರ ಒಲೆ ಎಂಬ ಹೆಸರಿನಲ್ಲಿ ಈಗಾಗಲೇ ಹಲವಾರು ವಿಧಾನದ ಒಲೆಗಳು ಚಾಲ್ತಿಯಲ್ಲಿದೆ. ಈ ಹೊಸ ಮಾದರಿಯ ಅಸ್ತ್ರ ಒಲೆಯ ವಿಶೇಷತೆ ಏನೆಂಬುದನ್ನು ತಿಳಿಯಬೇಕೆ, ಮುಂದೆ ಓದಿ ತಿಳಿದುಕೊಳ್ಳೋಣ.
ಅಸ್ತ್ರ ಒಲೆ
ಹೊಸ ಮಾದರಿಯ ಅಸ್ತ್ರ ಒಲೆಯಲ್ಲಿ ಬಳಸಲ್ಪಡುವ ಸೌದೆಯ ಉದ್ದ 16 ಇಂಚಿನಷ್ಟು ಅಥವಾ ಅದಕ್ಕಿಂತ ಕಡಿಮೆ. ತರಗೆಲೆ, ಅಡಿಕೆ ಸಿಪ್ಪೆ, ತೆಂಗಿನ ಸಿಪ್ಪೆ, ಗ್ಲಿರಿಸೀಡಿಯಾ ಗೆಲ್ಲು, (ಈಟಿನ ಗಿಡ, ಬೇಲಿ ಗಿಡ), ತೆಂಗಿನ ಗೆರಟೆ ಇವುಗಳು ಸಹಕಾರಿ. ಪ್ಲಾಸ್ಟಿಕ್ ಬಳಸುವಂತಿಲ್ಲ. ಮೇಲೆ ತಿಳಿಸಿದ ಸೌದೆ ಹೊರತು ಪಡಿಸಿ ಬೇರೆ ಬೇರೆ ಉರುವಲನ್ನು ಬಳಸುವ ಕ್ರಮ ಬೇರೆ ಬೇರೆ ವಿಧಾನದಲ್ಲಿದೆ.
ಹೊಸಮಾದರಿ ಅಸ್ತ್ರ ಒಲೆ
ಹೊಸ ಮಾದರಿಯ ಅಸ್ತ್ರ ಒಲೆಗೆ ಬೇಕಾಗಿರುವ ಸ್ಥಳ 2 ಫೀಟ್ ಅಗಲ ಹಾಗೂ 6 ಫೀಟ್ ಉದ್ದ. ಎತ್ತರ ನಿಮಗೆ ಬೇಕಾದಂತೆ ನಿರ್ಮಿಸಬಹುದು. ನೆಲದಲ್ಲಿ ನಿರ್ಮಿಸುವುದಾದಲ್ಲಿ ನೆಲದಿಂದ 15 ಇಂಚು ಎತ್ತರ ಬರುತ್ತದೆ. ನಿಂತು ಅಡುಗೆ ಮಾಡುವಂತಾದರೆ ನೆಲದಿಂದ 27 ಇಂಚು ಬರುತ್ತದೆ. ಈ ರೀತಿಯಲ್ಲಿ ಮಾಡುವುದಾದರೆ 6*2 ಪೀಟ್ ಉದ್ದಗಲದ ಮತ್ತು 2 ಇಂಚು ದಪ್ಪದ ಕಾಂಕ್ರೀಟ್ ಸ್ಲ್ಯಾಬ್ ಬೇಕಾಗುತ್ತದೆ.
130 ಒಳ್ಳೆಯ ಇಟ್ಟಿಗೆ, ಒಂದು ಸಿಮೆಂಟು ಪೈಪು, ಒಂದು ಚೀಲ ಸಿಮೆಂಟ್, ಅದಕ್ಕೆ ಬೇಕಾದಷ್ಟು ಮರಳು, ನಾಲ್ಕು ಬುಟ್ಟಿಯಷ್ಟು ಕಲಸಿ ಪಾಕ ಮಾಡಿದ ಮಣ್ಣು, ಕಾಸ್ಟಿಂಗ್ ಮಾಡಿದ ಒಲೆಬಾಯಿಗಳು, ಬಾಗಿಲು, ಜಾಲರಿ, ಬೂದಿ ಟ್ರೇ, ಗಾಳಿ ಕೊಳವೆ, ಬಿಸಿನೀರು ಪಾತ್ರೆ, ಮುಚ್ಚಳ, ಡ್ರಯರ್ ಸ್ಲಾಬ್, ಸಿಮೆಂಟ್ ಶೀಟ್, ಒಬ್ಬ ಸಾರಣೆಯವ, ಇಬ್ಬರು ಸಹಾಯಕರು. ಒಂದು ದಿನದ ಕೆಲಸ ಬೇಕಾಗುತ್ತದೆ. ಮಾರನೆ ದಿನ ಅವರೇ ಅದಕ್ಕೆ ಸಾರಣೆಯನ್ನೂ ಮಾಡಬೇಕು. ಟೈಲ್ಸ್ ಹಾಕಿದರೂ ಉತ್ತಮ.
ಒಂದೂವರೆ ಸೇರು ಅಕ್ಕಿ ಅಡುಗೆ ಮಾಡುವ ಸಾಮಾನ್ಯ ಮಾದರಿಯ ಅಸ್ತ್ರ ಒಲೆ ಕಟ್ಟಲು ಒಟ್ಟು 29 ಸಾವಿರ ವೆಚ್ಚ ತಗಲುತ್ತದೆ. ಅಂದರೆ ನಿಮ್ಮ ಮನೆ ಬಾಳಿಕೆ ಬರುವಷ್ಟೇ ಗಟ್ಟಿಯ ಒಲೆ ಇಲ್ಲಿ ನಿರ್ಮಾಣವಾಗಿರುತ್ತದೆ. ಒಂದು ಒಲೆಯಲ್ಲಿ ಗಂಟೆಗೆ ಒಂದೂವರೆ ಕಿಲೋ ಸೌದೆ ಉರಿಯಬೇಕು. ಅಂದರೆ ಎರಡು ಗಂಟೆ ಅಡುಗೆ ಮಾಡಿದರೆ ಸುಮಾರು 3 ಕೆ ಜಿ ಕಟ್ಟಿಗೆ ಬಳಕೆಯಾಗಬೇಕು. ಆ ಕಟ್ಟಿಗೆಯಲ್ಲಿ, ಮೇಲೆ ಹೇಳಿದ ಪ್ರಮಾಣದಷ್ಟು ಅಕ್ಕಿಯ ಅನ್ನ, ಅದಕ್ಕೆ ಬೇಕಾದಷ್ಟು ಸಾರು ಹಾಗೂ ಒಲೆಯೊಂದಿಗೆ ಕೊಡುವ ಸುಮಾರು 10 ಲೀ ಬಿಸಿನೀರು ಪಾತ್ರೆಯಲ್ಲಿ 2 ಪಾತ್ರೆಯಷ್ಟು ಬಿಸಿನೀರು ಸಿಗಬೇಕು. 2 ಅಡಿ×ಒಂದೂವರೆ ಅಡಿಯ ಒಣಗಿಸುವ ಜಾಗ ಸಿಗಬೇಕು. ಹೊಗೆ ಕೊಳವೆಯನ್ನು ಅಡುಗೆ ಕುದಿಯುತ್ತಿರುವಾಗ ಗಟ್ಟಿಯಾಗಿ ತಬ್ಬಿ ಹಿಡಿಯಲು ಸಾಧ್ಯವಾಗಬೇಕು. ಇದು ತರಬೇತಿ ಪಡೆದ ಅಸ್ತ್ರ ಒಲೆಯ ಮಾದರಿ ಚಿತ್ರಣ. ಈ ರೀತಿ ಇಲ್ಲದೆ ಇದ್ದಲ್ಲಿ ನಕಲಿ ಎಂದೇ ತಿಳಿಯಬೇಕು.
ತರಬೇತಿ ಮುಖ್ಯ
ಅಸ್ತ್ರ ಒಲೆ ನಿರ್ಮಿಸುವವರಿಗೆ ಪೂರ್ಣ ಪ್ರಮಾಣದ ತರಬೇತಿ ಅಗತ್ಯವಾಗಿ ಬೇಕಾಗುತ್ತದೆ. ತರಬೇತಿ ಇಲ್ಲದೆ ಅಸ್ತ್ರ ಒಲೆ ನಿರ್ಮಿಸಿದ ಹಲವೆಡೆ ವಿವಿಧ ಸಮಸ್ಯೆಗಳು ಎದುರಾಗಿದ್ದು, ಕಡಿಮೆ ಖರ್ಚಿನಲ್ಲಿ ಮಾಡಿಸುತ್ತಾರೆಂದು ತರಬೇತಿ ಇಲ್ಲದವರಲ್ಲಿ ಈ ಒಲೆ ನಿರ್ಮಿಸಿದಲ್ಲಿ ಸಮಸ್ಯೆ ಕಂಡಿತ ಎನ್ನುತ್ತಾರೆ. ತರಬೇತಿ ಪಡೆದ ವ್ಯಕ್ತಿಗಳಿಗೆ ಇದರ ತರಬೇತಿ ಪೂರ್ಣಗೊಳಿಸಿರುವ ಬಗ್ಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಅಂತವರಲ್ಲಿ ಅಸ್ತ್ರ ಒಲೆ ನಿರ್ಮಿಸುವುದು ಉತ್ತಮ ಎನ್ನಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಕರುಣಾಕರ ಎನ್.ವಿ. ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಕರುಣಾಕರ ಎನ್.ವಿ. ಅವರು (ASTRA= Application of Science and Technology in Rural Area ) ಗ್ರಾಮೀಣ ಪ್ರದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸುವುದರ ಬಗ್ಗೆ ತರಬೇತಿ ಪಡೆದವರು.
ಈ ರೀತಿಯ ಅಸ್ತ್ರ ಒಲೆಯ ಸಂಪೂರ್ಣ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದು. ಇವರ ಮೊಬೈಲ್ ನಂಬರ್ – +91 9880866398
ಕೃಷಿಗೆ ಸಂಬಂಧಿಸಿದ ಲೇಖನಗಳಿಗೆ ಸದಾ ಸ್ವಾಗತ.
ಕೃಷಿಲೋಕಕ್ಕೆ ನೀವೂ ಕೂಡ ಲೇಖನಗಳನ್ನು ಬರೆಯಬಹುದು. ಕೃಷಿಯಾಧಾರಿತ ಯಾವುದೇ ಲೇಖನಗಳು, ಸುದ್ದಿಗಳಿದ್ದರೂ ನಮಗೆ ಕಳುಹಿಸಿಕೊಡಬಹುದು. ನಿಮ್ಮ ಉತ್ತಮ ಬರಹಕ್ಕೆ ನಾವು ವೇದಿಕೆ ಒದಗಿಸಲಿದ್ದೇವೆ.
ಸಂಪರ್ಕಕ್ಕಾಗಿ :
+91 8431215975, +91 7760479111