Nano Urea : ವಿಶ್ವದ ಮೊದಲ ನ್ಯಾನೋ ಯೂರಿಯಾ ಗೊಬ್ಬರ ಅಭಿವೃದ್ಧಿಪಡಿಸಿದ ಇಫ್ಕೊ – ದ್ರವ ರೂಪದಲ್ಲಿ ಯೂರಿಯಾ ಸಿಂಪಡಿಸಿ, ಕೃಷಿಯನ್ನು ಲಾಭದಾಯಕವಾಗಿಸಿ…

Nano Urea : ವಿಶ್ವದ ಮೊದಲ ನ್ಯಾನೋ ಯೂರಿಯಾ ಗೊಬ್ಬರ ಅಭಿವೃದ್ಧಿಪಡಿಸಿದ ಇಫ್ಕೊ – ದ್ರವ ರೂಪದಲ್ಲಿ ಯೂರಿಯಾ ಸಿಂಪಡಿಸಿ, ಕೃಷಿಯನ್ನು ಲಾಭದಾಯಕವಾಗಿಸಿ…

ಕೃಷಿ ಲೋಕ : ಹತ್ತಾರು ಸವಾಲು ಎದುರಿಸುತ್ತಿರುವ ಕೃಷಿ ಕ್ಷೇತ್ರದಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಒಣ ಬೇಸಾಯಕ್ಕಂತೂ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಬೇಕಾದಾಗ ಮಳೆಯಾಗುವುದಿಲ್ಲ, ಬೇಡವಾದಾಗ ಅತಿವೃಷ್ಟಿ ಸೃಷ್ಟಿಯಾಗುತ್ತದೆ. ಅತಿಯಾದ ಮಳೆಯಿಂದ ರೋಗಬಾಧೆ ಕಾಡುತ್ತದೆ. ಈ ಎಲ್ಲ ಸಮಸ್ಯೆಗಳಿಂದ ಬೇಸತ್ತ ಅನ್ನದಾತ ಮಣ್ಣಿಗೆ ಜೀವಾಂಶ ನೀಡುವ ಭರಾಟೆಯಲ್ಲಿ ಅತಿಯಾದ ಗೊಬ್ಬರ ಬಳಕೆ ಮಾಡುತ್ತಿದ್ದು, ಭೂಮಿಯ ಫಲವತ್ತತೆ ಕಡಿಮೆಯಾಗುವುದಕ್ಕೆ ಕಾರಣವಾಗುತ್ತಿದ್ದಾನೆ.

ಆದರೆ ರಸಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಫಲವತ್ತತೆ ಹೆಚ್ಚಿಸಲು ದ್ರವರೂಪದ ನ್ಯಾನೋ ರಸಗೊಬ್ಬರ ಸಹಕಾರಿಯಾಗಿದ್ದು, ನ್ಯಾನೋ ತಾಂತ್ರಿಕತೆಯ ರಸಗೊಬ್ಬರ ಅಭಿವೃದ್ಧಿಪಡಿಸಿದ ಶ್ರೇಯಸ್ಸು ಇಫ್ಕೊ ಸಂಸ್ಥೆಗೆ ಸಲ್ಲುತ್ತದೆ. ಎನ್‌ಬಿಆರ್‌ಸಿ, ಕಾಲೋಲ್ ಪ್ರಯೋಗಾಲಯ ಇದನ್ನು ತಯಾರಿಸಿದ್ದು, ಕೃಷಿಯಲ್ಲಿ ಹೊಸ ಕ್ರಾಂತಿಯ ಸೃಷಿಗೆ ಬುನಾದಿಯಾಗುತ್ತಿದೆ.

ಗುಜರಾತ್‍ನ ಕಲೋಲ್‍ನಲ್ಲಿರುವ ನ್ಯಾನೋ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ ಹಲವು ವರ್ಷಗಳ ಸಂಶೋಧನೆ ಬಳಿಕ ಈ ಗೊಬ್ಬರವನ್ನು ಅಭಿವೃದ್ದಿಪಡಿಸಲಾಗಿದ್ದು, ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ ಅನುಮೋದಿಸಿ ರಸಗೊಬ್ಬರ ನಿಯಂತ್ರಣ ಕಾಯ್ದೆ 1985ರಲ್ಲಿ ಸೇರಿಸಲಾಗಿದೆ. ಇದು ಶೇ.4 ನ್ಯಾನೋ ಸಾರಜನಕ ಕಣ ಹೊಂದಿದ್ದು, ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರ ಸೇರಿ 20ಕ್ಕೂ ಹೆಚ್ಚು ಸಂಸ್ಥೆಗಳ ಮೂಲಕ 11,000 ಸ್ಥಳಗಳಲ್ಲಿ 94 ಬೆಳೆಗಳ ಮೇಲೆ ಪರೀಕ್ಷಿಸಲಾಗಿದೆ.

500 ಮಿ.ಲೀ. ಬಾಟಲ್ 1 ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮ

500 ಮಿ.ಲೀ. ಬಾಟಲ್ ನ್ಯಾನೋ ಯೂರಿಯಾ 1 ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನವಾಗಿದ್ದು, 500 ಮಿ.ಲೀ ಬಾಟಲಿ 40,000 ಪಿಪಿಎಂ ಸಾರಜನಕ ಹೊಂದಿದೆ. ನ್ಯಾನೋ ಯೂರಿಯಾ ದ್ರವರೂಪದಲ್ಲಿದ್ದು, ನಾಟಿ ಮಾಡಿದ 30 ದಿನಗಳ ನಂತರ ಮೊದಲ ಸಿಂಪರಣೆ ಹಾಗೂ ಹೂ ಬರುವ ಮುಂಚೆ ಸಸ್ಯಗಳ ಎಲೆಗಳ ಮೇಲೆ ಸಿಂಪಡಿಸಲಾಗುತ್ತದೆ. ಇದರಿಂದ ನ್ಯಾನೋ ಯೂರಿಯಾ ಬೇರು ಮಟ್ಟದವರೆಗೆ ತಲುಪಿ, ಸಸ್ಯಗಳಿಗೆ ಅಧಿಕ ಪೋಷಕಾಂಶ ನೀಡುತ್ತದೆ. ಭೂಮಿಗೆ ಬಳಸುವ ಯೂರಿಯಾ ರಸಗೊಬ್ಬರದಲ್ಲಿ ಬೆಳೆಗಳಿಗೆ ಶೇ.20 ರಿಂದ 25 ಮಾತ್ರವೇ ಲಭ್ಯವಾಗುತ್ತಿದ್ದು, ಉಳಿದ ಪ್ರಮಾಣವು ವಿವಿಧ ರೀತಿಯಲ್ಲಿ ಬೆಳೆಗಳಿಗೆ ದೊರೆಯದೇ ನಷ್ಟವಾಗುತ್ತದೆ. ಆದರೆ ನ್ಯಾನೋ ಯೂರಿಯಾ ಗೊಬ್ಬರವು ಚಿಕ್ಕ ಗಾತ್ರದ ಕಣಗಳನ್ನು ಹೊಂದಿದ್ದು, ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಿ ಶೇ.80 ರಷ್ಟು ಗೊಬ್ಬರವನ್ನು ಉಪಯೋಗಿಸಲ್ಪಡುತ್ತದೆ.

ರೈತರ ಆದಾಯ ಹೆಚ್ಚಿಸುತ್ತದೆ

ನ್ಯಾನೋ ಯೂರಿಯಾ ಗೊಬ್ಬರ ಬಳಕೆ ಸಸ್ಯದ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಇದು ಸಸ್ಯದೊಳಗಿನ ಸಾರಜನಕನ ಮತ್ತು ಇತರೆ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ಸಂಯೋಜಿಸುವ ಮಾರ್ಗಗಳನ್ನು ಪ್ರಚೋದಿಸಿ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ನ್ಯಾನೋ ಯೂರಿಯಾ ಬಳಕೆಯಿಂದ ಯೂರಿಯಾ ಬಳಕೆಯನ್ನು ಶೇ.50 ರಷ್ಟು ಕಡಿಮೆ ಮಾಡಿ ಬೆಳೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುತ್ತದೆ. ಇದು ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವಲ್ಲಿ ಸಹಕರಿಯಾಗಿದೆ.

ಹೀಗೆ ಬಳಕೆ ಮಾಡಿ

ರೈತರು ತಮ್ಮ ಬೆಳೆಗೆ ಕೊಡುವ ಮೂಲ ಗೊಬ್ಬರ ಅಥವಾ ತಳಗೊಬ್ಬರದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಮೇಲು ಗೊಬ್ಬರವಾಗಿ 2 ರಿಂದ 4 ಮಿ. ಲೀ. ನ್ಯಾನೋ ಯೂರಿಯಾವನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬೇಕು. ಉತ್ತಮ ಫಲಿತಾಂಶಕ್ಕಾಗಿ 20 ರಿಂದ 25 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು. ಮೊಳಕೆ ಒಡೆದ 30 ರಿಂದ 35 ದಿನಗಳ ನಂತರ ಅಥವಾ ನಾಟಿ ಮಾಡಿದ 20 ರಿಂದ 25 ದಿನಗಳ ನಂತರ ಮೊದಲನೇ ಸಿಂಪಡಣೆ ಹಾಗೂ ಹೂ ಬರುವ ಮುಂಚಿತವಾಗಿ ಅಥವಾ 20 ರಿಂದ 25 ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ ಮಾಡಬೇಕು.

ಪರಿಸರ ಮಾಲಿನ್ಯವಿಲ್ಲ

ಬೆಳೆಯ ಬೆಳವಣಿಗೆಯಲ್ಲಿ ಸಾರಜನಕ ಅಗತ್ಯ. ಅದಕ್ಕಾಗಿ ರೈತರು 2ರಿಂದ 3 ಹಂತದಲ್ಲಿ ಯೂರಿಯಾ ಗೊಬ್ಬರ ನೀಡುತ್ತಾರೆ. ಸಾರಜನಕವು ಅಮೋನಿಯಾ ಹಾಗೂ ನೈಟ್ರಸ್ ಆಕ್ಸೆಡ್ ರೂಪದಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಮಲಿನಗೊಳಿಸುತ್ತದೆ. ಆದರೆ, ನ್ಯಾನೋ ಯೂರಿಯಾವನ್ನು ಬೆಳೆಗಳ ಮೇಲೆ ಸಿಂಪಡಿಸುವುದರಿಂದ ಪರಿಸರ ಮಾಲಿನ್ಯವಾಗುವುದಿಲ್ಲ.

ಉಪಯೋಗಗಳೇನು?

ನ್ಯಾನೋ ಕಣಗಳು ಸೂಕ್ಷ್ಮವಾಗಿದ್ದು, ಸ್ಪ್ರೇಯರ್ ಮೂಲಕ ಎಲೆಗಳ ಮೇಲೆ ಸಿಂಪಡಿಸುವುದರಿಂದ ಸಸ್ಯವು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ. ನಂತರ ಇಡೀ ಸಸ್ಯಕ್ಕೆ ಸರಬರಾಜು ಆಗುತ್ತದೆ.
ಸಾಂಪ್ರದಾಯಿಕ ಯೂರಿಯಾ ಬಳಕೆ ಶೇ.50 ಕಡಿಮೆಯಾಗುತ್ತದೆ.
ಉತ್ತಮ ಇಳುವರಿಗಾಗಿ ಎಲ್ಲ ಬೆಳೆಗಳಿಗೆ ನೀಡಬಹುದು. ಇದು ಆಹಾರ ಮತ್ತು ಪರಿಸರಕ್ಕೆ ಸುರಕ್ಷಿತವಾಗಿದ್ದು, ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವಾಗಲಿದೆ.
ಸಂಗ್ರಹಣೆ ಮತ್ತು ಸಾಗಣೆ ಸುಲಭವಾಗಿದ್ದು, ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ವಿಷಕಾರಿಯಲ್ಲ. ಇದು ಬೆಳೆಯ ಉತ್ಪಾದಕತೆಯನ್ನು ಶೇ. 8 ಹೆಚ್ಚಿಸುತ್ತದೆ.

ಈ ಶತಮಾನ ನ್ಯಾನೋ ತಂತ್ರಜ್ಞಾನಕ್ಕೆ ಸೇರಿದ್ದಾಗಿದ್ದು, ಈಗ ಕೃಷಿಯಲ್ಲೂ ಇದರ ಪ್ರವೇಶವಾಗಿದೆ. ನ್ಯಾನೋ ಯೂರಿಯಾ ಕೃಷಿಗೆ ಹೊಸ ಆಯಾಮ ನೀಡುತ್ತಿದ್ದು, ಮಣ್ಣಿನ ಪೌಷ್ಟಿಕಾಂಶ ಕಾಪಾಡಿಕೊಳ್ಳುವುದರ ಜೊತೆಗೆ ಸಾಗುವಳಿ ಹಾಗೂ ಸಾಗಣೆ ವೆಚ್ಚದಲ್ಲಿ ಅಪಾರ ಉಳಿತಾಯ ಮಾಡಲಿದೆ.

Related post

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ ಲಾಭ ಗಳಿಸಬಹುದು – ಟಾಪ್ 10 ಉದ್ಯಮಗಳ ಮಾಹಿತಿ ಇಲ್ಲಿವೆ ನೋಡಿ…

ಯುವಕರೇ ಗಮನಿಸಿ‌ : ಕಡಿಮೆ ಬಂಡವಾಳವಿದ್ರೂ ಈ ಕೃಷಿ ಉದ್ಯಮಗಳಿಂದ ಲಕ್ಷಗಟ್ಟಲೆ…

ನ್ಯೂಸ್ ಆ್ಯರೋ : ಯಾವುದೇ ಲಾಭದಾಯಕ ವ್ಯವಹಾರ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಬಹುದು. ಆದರೆ ವ್ಯಾಪಾರ ಕೈಹಿಡಿಯುವುದು ತುಂಬಾನೇ ಕಷ್ಟ.…
ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ ಅಡಿಕೆ ದರ ಇನ್ನಷ್ಟು ಏರುವ ನಿರೀಕ್ಷೆ..!!

ಅಡಿಕೆ ಬೆಳೆಗಾರರಿಗೆ ಸುಗ್ಗಿ, ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ – ಹೊಸ…

ನ್ಯೂಸ್ ಆ್ಯರೋ‌ : ಉತ್ತರ ಭಾರತದ ಅಡಿಕೆ ವ್ಯಾಪಾರಿಗಳು ದರ ನೋಡಿ ಖರೀದಿಸುತ್ತಿದ್ದು, ಹಳೆ ಅಡಿಕೆ ಬದಲು ಹೊಸ ಅಡಿಕೆಯತ್ತ ಮುಖ…

Leave a Reply

Your email address will not be published. Required fields are marked *