- ಕೃಷಿ ವಿಜ್ಞಾನ
- September 24, 2022
- No Comment
- 5698
ರೈತ ಮಿತ್ರ ಯೂರಿಯಾ ಗೊಬ್ಬರವನ್ನು ಮನೆಯಲ್ಲಿಯೇ ತಯಾರಿಸಬಹುದು – ಅತ್ಯಲ್ಪ ಹಣದಲ್ಲೂ ಉತ್ಕೃಷ್ಟ ಯೂರಿಯಾ ತಯಾರಿಸಿ : ವಿವರಗಳಿಗಾಗಿ ಈ ವರದಿ ಓದಿ.

ಕೃಷಿ ಲೋಕ: ಯೂರಿಯಾ ಗೊಬ್ಬರವು ಸಾರಜನಕ ಪೋಷಕಾಂಶವನ್ನು ಬಿಡುಗಡೆ ಮಾಡಿ ಬೆಳೆಗಳನ್ನು ಪೋಷಣೆ ಮಾಡುವುದರಿಂದ ಉತ್ತಮ ಫಸಲು ತೆಗೆಯಲು ಬಹಳ ಸಹಕಾರಿ. ಹಾಗಾಗಿಯೇ ಜಗತ್ತಿನಾದ್ಯಂತ ಕೃಷಿಯಲ್ಲಿ ಯೂರಿಯಾ ಬಳಕೆ ಅತ್ಯಗತ್ಯವಾಗಿದ್ದು, ಜಗತ್ತಿನಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಯೂರಿಯಾದಲ್ಲಿ ಶೇ. 90ರಷ್ಟು ಯೂರಿಯಾ ಕೃಷಿ ಕ್ಷೇತ್ರದಲ್ಲೇ ಉಪಯೋಗವಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ರಸಗೊಬ್ಬರಗಳು ನಿರೀಕ್ಷಿತ ಪ್ರಮಾಣದಲ್ಲಿ ಮತ್ತು ಸಮಯಾನುಸಾರವಾಗಿ ರೈತರಿಗೆ ದೊರೆಯುತ್ತಿಲ್ಲ. ಇದು ಸರ್ಕಾರಕ್ಕೆ ಮತ್ತು ಕೃಷಿಕರಿಗೆ ಪ್ರತಿವರ್ಷ ಎದುರಾಗುವ ತಲೆನೋವು. ಮುಂಗಾರು ಶುರುವಾಗುತ್ತಿದ್ದಂತೆಯೇ ರೈತರಿಗೆ ಅಗತ್ಯವಾಗಿ ಬೇಕಾದದ್ದು ಯೂರಿಯಾ ಗೊಬ್ಬರ. ಅದಕ್ಕಾಗಿ ರೈತರು ಅಂಗಡಿಗಳ ಮುಂದೆ ಸಾಲು ನಿಲ್ಲುವುದು ಕಂಡುಬರುತ್ತದೆ.
ಪ್ರತಿ ವರ್ಷ ಭಾರತದ ಅನೇಕ ಕಡೆಗಳಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗುತ್ತಲೇ ಇದ್ದು, ಸರಕಾರಕ್ಕೆ ಹಾಗೂ ಕೃಷಿಕರಿಗೆ ಪ್ರತಿ ವರ್ಷವೂ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಮಳೆಗಾಲದ ಆರಂಭದ ಅವಧಿಯಲ್ಲಿ ಬೀಜಗಳ ಬಿತ್ತನೆ ಹಾಗೂ ಸಸಿಗಳ ನಾಟಿಯ ಸಂದರ್ಭದಲ್ಲಿ ರೈತರು ರಾಸಾಯನಿಕ ಗೊಬ್ಬರಗಳ ಮಾರಾಟ ಮಳಿಗೆಗಳ ಎದುರು ಹಾಗೂ ಸರ್ಕಾರದ ದಾಸ್ತಾನು ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ.
ಆದರೂ ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದ ಯೂರಿಯಾ ಸಿಗದಿರುವುದು ಹಾಗೂ ಈ ಸಮಸ್ಯೆಗೆ ಇಲ್ಲಿಯತನಕ ಶಾಶ್ವತ ಪರಿಹಾರ ದೊರೆಯದಿರುವುದು ಸತ್ಯ. ಈ ಸಮಸ್ಯೆಯನ್ನು ಪರಿಹರಿಸಲು ಸರಕಾರಗಳು ಕಾಲಕಾಲಕ್ಕೆ ಪ್ರಯತ್ನ ಪಡುತ್ತಲೇ ಇವೆ. ಆದರೆ ಈ ವಿಷಯದಲ್ಲಿ ರೈತರು ಗಮನಿಸಬೇಕಾದ ಅಂಶವೊಂದಿದ್ದು, ಸರ್ಕಾರದ ಮೇಲೆ ಅವಲಂಬಿತರಾಗದೇ ತಮ್ಮ ಮನೆಯಲ್ಲಿಯೇ ಸಾವಯವ ಯೂರಿಯಾ ಗೊಬ್ಬರ ತಯಾರಿಸಿ ಹಣ ಮತ್ತು ಸಮಯವನ್ನು ಉಳಿಸಬಹುದಾಗಿದೆ.
ತಯಾರಿಕೆ ಹೇಗೆ..?
ರೈತರು ಸ್ವತಃ ಯೂರಿಯಾ ತಯಾರಿಸಿ ಉಪಯೋಗಿಸಿದರೆ ದೊಡ್ಡ ಸಮಸ್ಯೆ ಪರಿಹಾರವಾದಂತಾಗುತ್ತದೆ. ಸಾವಯವ ಪದ್ಧತಿ ಮೂಲಕ ಅಂದರೆ ಎಮ್ಮೆ, ಹಸು ಮತ್ತಿತರ ದನಕರುಗಳ ಗಂಜಲು (ದೇಸಿ ರಾಸುಗಳ ಗಂಜಲವಾದರೆ ಉತ್ತಮ) ಮತ್ತು ಮರಳನ್ನು ಬಳಸಿ ಕೇವಲ ಒಂದು ತಿಂಗಳಲ್ಲಿ ತಮಗೆ ಅಗತ್ಯವಿರುವಷ್ಟು ಯೂರಿಯಾವನ್ನು ತಯಾರಿಸಿಕೊಳ್ಳಬಹುದು.
ಮನೆ ಅಥವಾ ಜಮೀನಿನ ಪಕ್ಕದ ನೆರಳಲ್ಲಿ 5 ಅಡಿ ಉದ್ದ, 4 ಅಡಿ ಅಗಲ ಹಾಗೂ 2 ಅಡಿ ಆಳದ ಗುಂಡಿ ತೆಗೆಯಬೇಕು. ಸಿಮೆಂಟ್ ತೊಟ್ಟಿಯಲ್ಲಿಯೂ ಮಾಡಬಹುದು. ದನದ ಕೊಟ್ಟಿಗೆಯ ಪಕ್ಕದಲ್ಲಿ, ಅಂದರೆ ದನಗಳ ಗಂಜಲ ಹೊರಹೋಗುವ ಸ್ಥಳಕ್ಕೆ ಹೊಂದಿಕೊಂಡಂತೆ ಗುಂಡಿ ತೆಗೆಯುವುದು ಸೂಕ್ತ. ಬಳಿಕ ಆ ಗುಂಡಿಯಲ್ಲಿ ಒಂದೂವರೆ ಅಥವಾ ಒಂದೂಮುಕ್ಕಾಲು ಅಡಿವರೆಗೆ ಮರಳು ತುಂಬಬೇಕು. ಅದಕ್ಕೆ 30 ದಿನಗಳವರೆಗೆ ದಿನವಿಡೀ ಲಭ್ಯವಿರುವ ಗಂಜಲನ್ನು ಸುರಿಯುತ್ತಿರಬೇಕು.
ಈ ಪ್ರಕ್ರಿಯೆಯಿಂದಾಗಿ 30 ದಿನಗಳ ಬಳಿಕ ಮರಳಿನಲ್ಲಿ ಸಾರಜನಕದ ಅಂಶ ಕ್ರೋಢೀಕರಣಗೊಳ್ಳುತ್ತದೆ. ಗುಂಡಿಯೊಳಗಿನ ಮರಳು ಕಪ್ಪು ಬಣ್ಣಕ್ಕೆ ತಿರುಗಿದರೆ ಸಾರಜನಕದ ಅಂಶ ಕ್ರೋಡೀಕೃತವಾಗಿದೆ ಎಂದರ್ಥ. 30 ದಿನಗಳ ನಂತರ ಮರಳನ್ನು ಗುಂಡಿಯಿಂದ ಹೊರತೆಗೆದು ಗೋಣಿಚೀಲಗಳ ಮೇಲೆ ಹರಡಿ, ಒಂದೆರಡು ದಿನ ನೆರಳಲ್ಲಿ ಒಣಗಿಸಿ ಬಳಿಕ ಚೀಲಗಳಲ್ಲಿ ತುಂಬಿ ನೆರಳಿನಲ್ಲಿ ಶೇಖರಿಸಿಟ್ಟುಕೊಂಡು ಹಂತ ಹಂತವಾಗಿ ಬೆಳೆಗಳಿಗೆ ಉಪಯೋಗಿಸಬೇಕು.
ಉಪಯೋಗಗಳು
- ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಯೂರಿಯಾದ ರೀತಿಯಲ್ಲಿಯೇ ಸಾವಯವ ಯೂರಿಯಾವನ್ನು ಮೇಲು ಗೊಬ್ಬರವಾಗಿ ಬಳಸಬಹುದು.
- ಸಾವಯವ ಯೂರಿಯಾದಿಂದ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಅಂಶ ಲಭ್ಯವಾಗುತ್ತದೆ. ಜತೆಗೆ ಬೆಳೆಗಳಿಗೆ ಅಗತ್ಯವಿರುವ ಇನ್ನಿತರ ಪೋಷಕಾಂಶಗಳು ಸಹ ದೊರೆಯುತ್ತವೆ.
- ಈ ಯೂರಿಯಾದಲ್ಲಿ ರಾಸಾಯನಿಕಗಳು ಇಲ್ಲದಿರುವ ಕಾರಣ ಮಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ. ಫಲವತ್ತತೆ ಹೆಚ್ಚಾಗುತ್ತದೆ.
- ಪ್ರತಿ 50 ಕೆಜಿ ಸಾವಯವ ಯೂರಿಯಾ ತಯಾರಿಸಿದಾಗ ರೈತರಿಗೆ ಅಂದಾಜು ರೂ. 250 ಉಳಿತಾಯವಾಗುತ್ತದೆ.